ಕನಕದಾಸರು ಕನ್ನಡದ ಮಹತ್ವದ ಸಾಂಸ್ಕೃತಿಕ ವ್ಯಕ್ತಿತ್ವ

2
Published on

ಮೈಸೂರು: ಕನಕದಾಸರು ಕೇವಲ ಕವಿಯಲ್ಲ, ವಚನಕಾರರೂ ಅಲ್ಲ. ಕನಕದಾಸರು ಕೂಡ ಬಸವಣ್ಣ ಮತ್ತು ಕುವೆಂಪು ಅವರಂತೆ ಕನ್ನಡದ ಮಹತ್ವದ ಸಾಂಸ್ಕೃತಿಕ ವ್ಯಕ್ತಿತ್ವ ಆಗಿದ್ದಾರೆ ಎಂದು ಸಾಹಿತಿ ಮತ್ತು ಪ್ರಾಧ್ಯಾಪಕ ಚಿಕ್ಕಮಗಳೂರು ಗಣೇಶ್ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಹಿಂದುಳಿದ ವರ್ಗಗಳ ಘಟಕದ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನಕದಾಸರು ಕನ್ನಡ ನಾಡಿನ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಅವರಿಗೆ ಸಂಬಂಧಿಸಿದಂತೆ ನೂರಾರು ಐತಿಹ್ಯವನ್ನು ಜನಸಮುದಾಯ ಕಟ್ಟಿದೆ. ಯಾವ ಸಾಂಸ್ಕೃತಿಕ ವ್ಯಕ್ತಿತ್ವದ ಮೇಲೆ ಜನಸಮುದಾಯ ಹೆಚ್ಚಾಗಿ ಕಥೆ, ಲಾವಣಿ, ಐತಿಹ್ಯ, ಜಾನಪದಗಳನ್ನು ಕಟ್ಟುತ್ತದೋ ಅವರು ನಿಜವಾದ ಅರ್ಥದಲ್ಲಿ ಸಾಂಸ್ಕೃತಿಕ ನಾಯಕರಾಗುತ್ತಾರೆ ಎಂದರು.

ಕನಕದಾಸರ ಕುರಿತಂತೆ ಕರ್ನಾಟಕದಾದ್ಯಂತ ಕನಕಪುರ, ಕನಕನಮರಡಿ, ಕನಕನಹಳ್ಳಿಗಳನ್ನು ಗಮನಿಸಬಹುದಾಗಿದೆ. ಕನಕದಾಸರು ಹೆಜ್ಜೆ ಗುರುತು ಮೂಡಿಸಿರುವ ಕಡೆಗಳಲ್ಲಿ ಅವರ ಹೆಸರು ಸ್ಮರಣೆ ಮಾಡುವ ಮೂಲಕ ಸಮುದಾಯ ಅವರಿಗೆ ಗೌರವ ನೀಡಿದೆ ಎಂದರು.
ಕನಕದಾಸರ ತತ್ವ-ಸಿದ್ಧಾಂತ ಸರ್ವಕಾಲಕ್ಕೂ ಪ್ರಸ್ತುತ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗುವ ಮೂಲಕ ಉತ್ತಮ ವ್ಯಕ್ತಿತ್ವ, ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಸ್ಫೂರ್ತಿ ಸೆಲೆಯಾದ ಕನಕದಾಸರು ವರ್ತಮಾನದಲ್ಲೇ ಬೆಳಕಾದರು. ಅವರ ದಾರಿಯಲ್ಲಿ ನಾವು ಸಾಗಬೇಕಿದೆ ಎಂದರು.

ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಕಾಣುತ್ತಿರುವ ವ್ಯತ್ಯಾಸಗಳು, ವೈರುಧ್ಯಗಳು ಈ ಹಿಂದಿನಿಂದಲೂ ಅನುಭವಿಸಿಕೊಂಡು ಬಂದಿದ್ದೇವೆ. ಇದನ್ನು ಗಮನಿಸಿ 500 ವರ್ಷಗಳ ಹಿಂದೆಯೇ ಸಂತಶ್ರೇಷ್ಠ ಭಕ್ತ ಕನಕದಾಸರು ‘ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯ ಏನಾದರೂ ಬಲ್ಲಿರಾ’ ಎಂದು ಸೂಚ್ಯವಾಗಿ ಹೇಳಿದ್ದಾರೆ. ತಮ್ಮ ಆಹಾರದ ಬಗ್ಗೆ ತಿಳಿಸಿದ್ದಾರೆ ಎಂದರು.
ಕುಲಸಚಿವರಾದ ವಿ.ಆರ್.ಶೈಲಜಾ, ಮಹಾದೇವನ್, ಹಿಂದುಳಿದ ವರ್ಗಗಳ ಘಟಕದ ಸಂಯೋಜನಾಧಿಕಾರಿ ಪ್ರೊ.ಬಿ.ಸಣ್ಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net