

ಸಂಡೂರು: ಕನಕದಾಸರು ಕನ್ನಡ ಮನಸ್ಸಿನ ವೈಚಾರಿಕ ಪರಂಪರೆಯ ಕೊಂಡಿ ಎಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಬಸವರಾಜ ಮಸೂತಿ ಅಭಿಪ್ರಾಯಪಟ್ಟರು.
ಪಟ್ಟಣದ ಕನಕ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಸಮಾನತೆಯ ವಾತಾವರಣ ಕನಕದಾಸರನ್ನು ಕಾಡಿತ್ತು. ಸಾಮಾಜಿಕ ನ್ಯಾಯ ಎಂಬುದು ಜಾತಿ, ಧರ್ಮ, ವೃತ್ತಿ , ವರ್ಣ ಸೇರಿ ಯಾವುದೇ ತಾರತಮ್ಯಗಳಿಲ್ಲದೆ ಸಮಪಾಲು ಪಡೆಯಲು ಅವಕಾಶ ನೀಡುವ ವ್ಯವಸ್ಥೆ ಎಂದು ಸಾರಿದರು. ಸಮಾನತೆ ಬಯಸಿದ ಕನಕದಾಸರು ಸಮಾಜ ಎತ್ತಿ ಹಿಡಿದಿದ್ದ ಪ್ರತ್ಯೇಕತೆ ಹಾಗೂ ಶ್ರೇಷ್ಠತೆಯನ್ನು ಧೈರ್ಯವಾಗಿ ಪ್ರಶ್ನಿಸಿದರು.
ಎಲ್ಲ ಅಧಿಕಾರ, ಕೀರ್ತಿ, ಹಮ್ಮುಗಳನ್ನು ಹಾಸ್ಯಮಾಡಿ ತಿರಸ್ಕರಿಸಿದರು. ಅವರು ತೋರಿಸಿಕೊಟ್ಟ ಬೆಳಕಿಂಡಿಯಲ್ಲಿ ಕಣ್ಣಿಟ್ಟು ನೋಡಬೇಕಿದೆ ಎಂದರು.
ಕಸಾಪ ತಾಲೂಕು ಗೌರವ ಅಧ್ಯಕ್ಷ ಕೆ.ಸತ್ಯಪ್ಪ, ಪುರಸಭೆ ಸದಸ್ಯ ಕೆ.ವಿ.ಸುರೇಶ್, ಕಸಾಪ ಜಿಲ್ಲಾ ನಿರ್ದೇಶಕ ನೀಲಕಂಠ, ಕಾರ್ಯದರ್ಶಿ ಈರಣ್ಣ, ಖಜಾಂಚಿ ರವಿಕುಮಾರ್, ಹನುಮಂತಪ್ಪ, ಕೊಂಡಾಪುರ ಕುಮಾರಸ್ವಾಮಿ, ಸೋವೇನಳ್ಳಿ ಶಿವಮೂರ್ತಿ ಇತರರಿದ್ದರು.