ಕನಕದಾಸರ ತತ್ವಾದರ್ಶಗಳು ನಿಸ್ವಾರ್ಥ ಜೀವನಕ್ಕೆ ದಾರಿ ದೀಪ - ಸಿ.ಆರ್. ನಾಗಭೂಷಣ್

19GDG06
Published on

ಕನಕದಾಸರು ಪ್ರತಿಪಾದಿಸಿರುವ ಜೀವನ ಮೌಲ್ಯಗಳು ನಿಸ್ವಾರ್ಥ ಜೀವನಕ್ಕೆ ದಾರಿ ದೀಪವಾಗಿವೆ. ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ.ಅಪರೂಪವಾದ ಮನುಷ್ಯ ಜನ್ಮದಲ್ಲಿ ಹುಟ್ಟಿ ಬಂದ ಬಳಿಕ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎಂದು ಕೆ.ಎಲ್.ಇ.ಸಂಸ್ಥೆಯ ಜೆ.ಟಿ.ಪ.ಪೂ.ಕಾಲೇಜಿನ ಉಪನ್ಯಾಸಕ ಸಿ.ಆರ್.ನಾಗಭೂಷಣ ಹೇಳಿದರು.

ಅವರು ಕೆ.ಎಲ್.ಇ.ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ದಾಸಶ್ರೇಷ್ಠ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕನಕದಾಸರು ತಮ್ಮ ಬಾಲ್ಯ ಜೀವನದಿಂದಲೇ ಹಲವು ವಿದ್ಯೆಗಳಲ್ಲಿ ಪಾರಂಗತರಾಗಿದ್ದರಲ್ಲದೆ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದರು.ವೀರನಾಗಿದ್ದ ಕನಕದಾಸರು ವಿರಾಗಿಯಾಗಿ ಪರಿವರ್ತನೆಯಾಗಲು ಯುದ್ಧವೊಂದು ಕಾರಣವಾಯಿತು,ಮುಂದೆ ಭಗವಂತ ಹರಿಯನ್ನು ಕೊಂಡಾಡುತ್ತಾ ಸಾಹಿತ್ಯ ರಚನೆಯಲ್ಲಿ ತೆಗೆದುಕೊಂಡರು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದದ್ದು. ಕೀರ್ತನೆಗಳಲ್ಲಿ ಕೃಷ್ಣನ ಲೀಲೆಗಳನ್ನು, ಸಾಮಾಜಿಕ ಸಮಾನತೆಯನ್ನು,ಭಕ್ತಿಯ ಸ್ವರೂಪವನ್ನು ಪ್ರತಿಪಾದಿಸಿದ್ದಾರೆ.ಸಾಮಾಜಿಕಶೋಷಣೆಯ ಸ್ಥಿತಿಗೆ ಮೂಲವಾದ ಜಾತಿ ವ್ಯವಸ್ಥೆಯನ್ನು ನಿರ್ನಾಮ ಮಾಡುವ ಅವಶ್ಯಕತೆಯನ್ನು ಅವರು ಪ್ರತಿಪಾದಿಸಿ ಜನಸಾಮಾನ್ಯರಿಗೆ ಆಶಾಕಿರಣವಾದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೋ.ಪಿ.ಜಿ. ಪಾಟೀಲ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ದಾಸಶ್ರೇಷ್ಠರು ಬಾಳಿದ ನಿಸ್ವಾರ್ಥ ಜೀವನದ ನೆಲೆಗಳನ್ನು ತಿಳಿಸಿದರು. ಜ್ಞಾನವನ್ನು ತಿಳಿದುಕೊಳ್ಳುವುದಷ್ಟೇ ಮುಖ್ಯವಲ್ಲ ಅದನ್ನು ನಾವು ಹೇಗೆ ಅಳವಡಿಸಿಕೊಂಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ ಎಂದು ಹೇಳಿದರು. ನಮ್ಮ ಮಕ್ಕಳಿಗೆ ದಾಸ ಪರಂಪರೆಯ ಬಗ್ಗೆ, ದಾಸ ಸಾಹಿತ್ಯದ ಬಗ್ಗೆ ಅರಿವನ್ನು ಮೂಡಿಸಬೇಕು. ಮನುಷ್ಯ ತನ್ನ ಜೀವನದ ನಿಜವಾದ ಗುರಿಯನ್ನು ಅರಿತು ಸಾಗಬೇಕು ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಕೀರ್ತನೆಗಳ ಮೂಲಕ ತಿಳಿದುಕೊಳ್ಳಬೇಕು ಎಂದು ಹೇಳಿದರು.ಇನ್ನು ಜಯಂತಿಗಳು ಕೇವಲ ಆಡಂಬರಕ್ಕೆ, ತೋರಿಕೆಗೆ ಮಾಡದೆ ಅವುಗಳನ್ನು ಮಹಾನ್ ವ್ಯಕ್ತಿಗಳ ಜೀವನ- ಸಾಧನೆ ಬಗ್ಗೆ ತಿಳಿದುಕೊಳ್ಳುವ, ಸೇವೆಯ ಬಗ್ಗೆ, ಸರಳ ಜೀವನದ ಬಗ್ಗೆ ನಾವು ನಮ್ಮ ಮಕ್ಕಳಿಗೆ ಮಟ್ಟುವಂತೆ ಮಾಡಬೇಕೆಂದು ಹೇಳಿದರು. ಡಾ.ನಾಗರಾಜ ಬಳಿಗೇರ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕು.ಸೌಭಾಗ್ಯ ಹಿರೇಮಠ ಪ್ರಾರ್ಥಿಸಿದರು,ವಿಶ್ವನಾಥ ಜಿ ವಂದಿಸಿದರು.ಕುಮಾರಿ.ದಿವ್ಯಾ ಹಾಗೂ ಪವಿತ್ರ ಪಾಟೀಲ ಕೀರ್ತನೆಗಳ ಗಾಯನ ಮಾಡಿದರು,ಶ್ರುತಿ ಮ್ಯಾಗೇರಿ ಮತ್ತು ರಾಜೇಶ್ವರಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.ಪದವಿ ಮಹಾವಿದ್ಯಾಲಯದ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಸೇರಿದಂತೆ 200ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net