

ಕನಕಗಿರಿ: ರೈತರಿಗೆ ಹೆಣ್ಣು ಕೊಡಿ ಎಂದು ಮಲೆಮಹದೇಶ್ವರ ಬೆಟ್ಟದಲ್ಲಿ ಯುವ ರೈತರು ಪಾದಯಾತ್ರೆ ನಡೆಸಿದ ಬಳಿಕ, ಇದೀಗ ಇಲ್ಲಿನ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹ ಸ್ವಾಮಿಯ ಜಾತ್ರೆಯಲ್ಲಿ ಬಾಳೆಹಣ್ಣಿಗೆ ರೈತರ ಬೆಳೆೆಗೆ ಬೆಂಬಲ ಸಿಗುವಂತಾಗಲಿ, ರೈತರಿಗೆ ಹೆಣ್ಣು ಸಿಗುವಂತಾಗಲಿ ಎಂದು ಬೇಡಿಕೊಂಡು ಯುವ ಅನ್ನದಾತರು ರಥಕ್ಕೆ ಬಾಳೆ ಹಣ್ಣು ಎಸೆದಿದ್ದಾರೆ.
ರೈತರು ಬೆಳೆದಾಗ ಬೆಲೆ ಇರುವುದಿಲ್ಲ. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕುತ್ತಾನೆ. ರೈತನ ಅಭ್ಯುದಯಕ್ಕಾಗಿ ಬೆಂಬಲ ಬೆಲೆ ಸಿಗಬೇಕು ಎಂದು ಹೋರಾಟಗಳು ನಡೆಯುತ್ತಲೇ ಇವೆ. ಅಲ್ಲದೇ, ದೇಶದ ಬೆನ್ನೆಲುಬು ರೈತ ಎಂದು ಹೇಳುವ ಜನರು ಇತ್ತೀಚಿನ ದಿನಗಳಲ್ಲಿ ವಧುವಿನ ಕಡೆಯವರು ನೌಕರಿದಾರ ವರನನ್ನೇ ಹುಡುಕುತ್ತಿದ್ದಾರೆ. ಅನ್ನ ಹಾಕುವ ರೈತರಿಗೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇದರಿಂದ ರೈತರ ಮಕ್ಕಳು ಮದುವೆಯಾಗದೇ ಹಾಗೇ ಉಳಿದುಕೊಳ್ಳುತ್ತಿದ್ದಾರೆ. ಅದಕ್ಕಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ರೈತರು ಪಾದಯಾತ್ರೆ ನಡೆಸಿ ಗಮನ ಸೆಳೆದಿದ್ದರು.
ಇದೀಗ ರೈತ ಸಂಘದ ಪದಾಧಿಕಾರಿಗಳಾದ ಯುವಕರು ಕನಕಗಿರಿಯ ಜಾತ್ರೆಯಲ್ಲಿ ರೈತರ ಬೆಳೆೆಗೆ ಬೆಂಬಲ ಬೆಲೆ ಸಿಗುವಂತಾಗಲಿ, ರೈತರಿಗೆ ಹೆಣ್ಣು ಸಿಗುವಂತಾಗಲಿ ಎಂದು ಬಾಳೆಹಣ್ಣಿಗೆ ಬರೆದು ರಥಕ್ಕೆ ಎಸೆದಿದ್ದಾರೆ.