

ಹಿರಿಯೂರು: ತೋಟಗಾರಿಕೆ ಬೆಳೆಗಳಿಗೆ ಹಿರಿಯೂರು ಯೋಗ್ಯ ಭೂಮಿ ಹಾಗೂ ಹವಾಗುಣ ಹೊಂದಿದ್ದು, ಇದಕ್ಕೆ ಪೂರಕವಾಗಿ ಉದ್ಯಮಗಳನ್ನು
ಸ್ಥಾಪಿಸುವ ಮೂಲಕ ಉದ್ಯೋಗದ ವಲಸೆ ತಡೆಯಬೇಕು ಎಂದು ವಿಜಯವಾಣಿಯ ಹಿರಿಯ ಪತ್ರಕರ್ತ ಹರ್ತಿಕೋಟೆ ರುದ್ರಣ್ಣ ಆಶಿಸಿದರು.
ತಾಲೂಕು ಕುರುಬ ಮತ್ತು ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ನಗರದ ತಾಹಾ ಪ್ಯಾಲೇಸ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕನಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಒಂದು ಟ್ರಿಲಿಯನ್ ಡಾಲರ್‌ನಷ್ಟು ಆರ್ಥಿಕ ಅಭಿವೃದ್ಧಿ ಮಾಡುವುದಾಗಿ ಸರ್ಕಾರ ಬಜೆಟ್‌ನಲ್ಲಿ ಹೇಳಿದೆ.
ಇದನ್ನು ಬಳಸಿಕೊಂಡು 2 ಮತ್ತು 3ನೇ ಹಂತದ ನಗರಗಳಾದ ಚಿತ್ರದುರ್ಗ, ಹಿರಿಯೂರು ಹಾಗೂ ಚಳ್ಳಕೆರೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದರು.
ಇದರಿಂದ ಈ ಭಾಗದ ರೈತರು, ವಿದ್ಯಾವಂತರು, ಪದವೀಧರರಿಗೆ ಅನುಕೂಲ ಆಗಲಿದೆ.
ಸ್ಥಳೀಯವಾಗಿ ಉದ್ಯೋಗದ ಅವಕಾಶಗಳ ಬಾಗಿಲು ತೆರೆಯಲಿದೆ. ಆರ್ಥಿಕ ಚೇತರಿಕೆಯೂ ಕಾಣಲಿದೆ ಎಂದು ಅಭಿಪ್ರಾಯಪಟ್ಟರು.
ನಾಡು, ನುಡಿಗೆ ಸೇವೆ ಸಲ್ಲಿಸಿದ ಎಲ್ಲ ವರ್ಗಗಳ ಮಹನೀಯರ ಸಾಧನೆ, ಸಾಮಾಜಿಕ ಕೊಡುಗೆ ಹಾಗೂ ಆದರ್ಶಗಳನ್ನು ಪಠ್ಯದಲ್ಲಿ ಸೇರಿಸಬೇಕು.
ಯುವಸಮೂಹ ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಮಾತನಾಡಿ, ಓದುವ ಮಕ್ಕಳಿಗೆ ಪಾಲಕರು,
ಶಿಕ್ಷಕರು ಆತ್ಮಸ್ಥೈರ್ಯ ತುಂಬಬೇಕೇ ಹೊರತು ಮತ್ತೊಬ್ಬರ ಜತೆ ಹೋಲಿಕೆ ಮಾಡಿ ಅವರನ್ನು ಕುಗ್ಗಿಸಬಾರದು ಎಂದು ತಿಳಿಸಿದರು.
ಸಚಿವ ಡಿ.ಸುಧಾಕರ್ ಮಾತನಾಡಿ, ಕುರುಬ ಸಮುದಾಯದ ಅಭಿವೃದ್ಧಿಗೆ ಬದ್ಧವಾಗಿದ್ದು, ಕನಕ ಭವನಕ್ಕೆ ಅಗತ್ಯ ನಿವೇಶ,ಅನುದಾನ ನೀಡುವ ಭರವಸೆ ನೀಡಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, 14 ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದರು.
ಮಾಜಿ ಸಂಸದ ಚಂದ್ರಪ್ಪ ಮಾತನಾಡಿ, ಸಿದ್ದರಾಮಯ್ಯ ಅವರದ್ದು ಕಳಂಕ ರಹಿತ ರಾಜಕೀಯ ಜೀವನ ಎಂದು ಬಣ್ಣಿಸಿದರು.
ಪುರಸ್ಕಾರ: ಎಸ್ಸೆಸ್ಸೆಲ್ಸಿ-ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕರಾದ ಟಿ.ರಘುಮೂರ್ತಿ, ವೀರೇಂದ್ರ ಪಪ್ಪಿ, ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಅವರನ್ನು ಸನ್ಮಾನಿಸಲಾಯಿತು.
ಕುರುಬರ ಸಂಘದ ತಾಲೂಕಾಧ್ಯಕ್ಷ ಬಿ.ಮಹಾಂತೇಶ್, ಪುರಸಭೆ ಮಾಜಿ ಅಧ್ಯಕ್ಷೆ ಮಂಜುಳಾ ವೆಂಕಟೇಶ್, ವಕೀಲ ವಿಶ್ವನಾಥ್, ಗಿರಿಜಪ್ಪ,
ರಜನಿ ಲೇಪಾಕ್ಷ, ಕಂದಿಕೆರೆ ಸುರೇಶ್ ಬಾಬು, ಮಂಜಣ್ಣ, ಜಯರಾಂ, ಗೋಡೆ ತಿಪ್ಪೇಸ್ವಾಮಿ, ಪ್ರವೀಣ್, ರಂಗನಾಥಪ್ಪ, ಸುರೇಶ್,
ವಿನಯ ಕುಮಾರ್, ದಯಾನಂದ, ಸಿದ್ದೇಶ್, ಹರ್ತಿಕೋಟೆ ಮಹಾಸ್ವಾಮಿ, ಪತ್ರಕರ್ತ ಮಂಜುನಾಥ್, ಕಾಂತರಾಜ್ ಹುಲಿ, ಡಾ.ಸಂದೀಪ್ ಇತರರಿದ್ದರು.
ಸಮಯ ಪಾಲನೆ ಅಗತ್ಯ: ವಿವಿಧ ಜಾತಿ, ಸಮುದಾಯಗಳು ಆಯೋಜಿಸುವ ಸಭೆ-ಸಮಾರಂಭಗಳಿಗೆ ಜನಪ್ರತಿನಿಧಿಗಳು ಸಕಾಲಕ್ಕೆ ಆಗಮಿಸಬೇಕು ಎಂದು ರುದ್ರಣ್ಣ ಹರ್ತಿಕೋಟೆ ತಿಳಿಸಿದರು.
ಕಾರ್ಯಕ್ರಮ ಆರಂಭವಾಗಿ ಎರಡು ಗಂಟೆ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿದ್ದನ್ನು ಪ್ರಸ್ತಾಪಿಸಿ ಜನರು, ಗಣ್ಯರು ಕಾಯುವಾಗ ವಿಳಂಬ ಮಾಡಬಾರದು ಎಂದರು.
ಹಿರಿಯೂರಿನಲ್ಲಿ ಕನಕ ಮತ್ತು ನೌಕರರ ಭವನ ನಿರ್ಮಾಣಕ್ಕೆ ತಾಲೂಕು ಕಚೇರಿ ಬಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಸಚಿವ ಸುಧಾಕರ್ ಸಹಕಾರ ನೀಡಬೇಕು. ಸಮುದಾಯದ ಪರವಾಗಿ ಇಎದು ನಮ್ಮ ಮಠದ ಹಕ್ಕೋತ್ತಾಯ.ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕಾಗಿನೆಲೆ ಮಠ
ವಿದ್ಯಾರ್ಥಿಗಳು ತಂದೆ-ತಾಯಿ ಅವರ ಕಷ್ಟ ಅರಿತು, ಪರಿಶ್ರಮ, ಬದ್ಧತೆಯಿಂದ ಸಾಧನೆ ಮಾಡಿದಾಗ ಮಾತ್ರ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ.ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಹೊಸದುರ್ಗ