

ಮಂಡ್ಯ: ಶೋಷಣೆ, ಜಾತಿ ನಿಂದನೆ ಮೀರಿ ನಿಂತ ಕನಕದಾಸರು ಸಂತ, ದಾಸ ಹಾಗೂ ದಾರ್ಶನಿಕರಾಗಿ ಕಾಣುತ್ತಾರೆ ಎಂದು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಪ್ರತಿಪಾದಿಸಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನ ಮೌಲ್ಯಮಾಪನ ಕೊಠಡಿಯಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಮಹಿಳಾ ಸರ್ಕಾರಿ ಕಾಲೇಜು(ಕನ್ನಡ ವಿಭಾಗ) ಸಹಯೋಗದಲ್ಲಿ ಆಯೋಜಿಸಿದ್ದ ಕನಕ ಸಂಸ್ಕೃತಿ ಸಂಚಲನ, ಕನಕ ನಡೆನುಡಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇರುವಿಕೆಯ ಅರಿವನ್ನು ಕನಕದಾಸರು ತನ್ನನ್ನ ತಾನು ಅರ್ಥ ಮಾಡಿಕೊಳ್ಳಲು ಮುಂದಾಗುತ್ತಾರೆ. ಸಾಮಾಜಿಕ ಪರಿಸರದಲ್ಲಿ ಇರುವಿಕೆಯನ್ನು ಪರೀಕ್ಷಿಸಲು ಮುಂದಾಗುತ್ತಾರೆ. ಕನಕದಾಸರು ವೈಧಿಕ ಧರ್ಮವನ್ನು ಅನುಸರಿಸುವೆಯೂ ಕೂಡ ಇರುವಿಕೆಯನ್ನು ಪ್ರತಿಪಾದಿಸುತ್ತಾ ಹೋಗುತ್ತಾರೆ. 145ಕ್ಕೂ ಹೆಚ್ಚು ಹರಿದಾಸರು ಬರುತ್ತಾರೆ. ಆದರೆ, ಕನಕದಾಸರು ಮಾತ್ರ ವಿದ್ಯುಕ್ತವಾಗಿ ಉಳಿಯುತ್ತಾರೆ. ಲೈಖಿಕವಾದ ಸಂಗತಿಗಳಿಗೆ ಅವರು ವಿಮುಖರಾಗುವುದಿಲ್ಲ. ಹಾಗಾಗಿ ಅದಕ್ಕೆ ಮುಖಾಮುಖಿಯಾಗಿ ಸಾಹಿತ್ಯ ರಚಿಸಲು ಮುಂದಾಗುತ್ತಾರೆ ಎಂದರು.
ಸಾಹಿತ್ಯವನ್ನು ಏಕೆ ರಚನೆ ಮಾಡುತ್ತಾರೆಂದರೆ ಕನಕದಾಸರು ಕೆಳವರ್ಗದಲ್ಲಿ ಜನಿಸಿದವರು. ವೈಷ್ಣವ ಧರ್ಮದಲ್ಲಿದ್ದವರು ಮೇಲ್ವರ್ಗದವರಾಗಿರುತ್ತಾರೆ. ಜಾತಿ ಕಾರಣಕ್ಕಾಗಿ ಕನಕದಾಸರನ್ನ ಅವಮಾನಿಸಲಾಗುತ್ತದೆ. ಇದಕ್ಕೆ ಅವರು ಹತಾಶರಾಗುವುದಿಲ್ಲ, ಯಾರಿಗೂ ಉತ್ತರ ಕೊಡುವುದಿಲ್ಲ. ಖಡ್ಗವನ್ನೂ ಹಿಡಿಯಲಿಲ್ಲ ಬದಲಿಗೆ ಲೇಖನಿಯನ್ನಿಡಿದು ಮೊದಲಿಗೆ ನಾಲ್ಕು ಮಹಾಕಾವ್ಯಗಳನ್ನು 300ಕ್ಕೂ ಹೆಚ್ಚು ಕೀರ್ತನೆಗಳನ್ನು ಬರೆಯುತ್ತಾ ಸಮಾಜದ ಪರಿವರ್ತನೆಗೆ ಮುಂದಾದರು ಎಂದು ತಿಳಿಸಿದರು.
ಕೇಂದ್ರದ ಸದಸ್ಯ ಸಂಚಾಲಕ ಚಕ್ಕೆರೆ ಶಿವಶಂಕರ್ ಮಾತನಾಡಿ, ಕನಕ ಅಧ್ಯಯನ ಕೇಂದ್ರದಿಂದ ಕಾರ್ಯಕ್ರಮ ನಿರೂಪಿಸುವ ಮೂಲಕ ಕನಕದಾಸರ ಪರಿಚಯಿಸುವ ಕೆಲಸ ಉತ್ತಮವಾಗಿದೆ. ಇವತ್ತಿನ ರೈತರು ಬೆಂಬಲ ಬೆಲೆ ಕೇಳುತ್ತಾ ಅವರ ಪರವಾಗಿ ಹೋರಾಟಗಳು ನಡೆಯುತ್ತಿವೆ. ಕನಕದಾಸರ ರಾಮಧಾನ್ಯ ಚರಿತೆಯನ್ನ ನೋಡಿದರೆ ರೈತರಪರವಾಗಿರುವ ವಿಷಯಗಳು ಬರುತ್ತವೆ. ಅದರಲ್ಲಿ ಬೆಂಬಲ ಬೆಲೆ ಯಾರು ನಿಗದಿ ಮಾಡಬೇಕೆನ್ನುವುದನ್ನು ಸರ್ಕಾರಗಳು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಉದಾಹರಣೆ ಸಹಿತ ವಿಶ್ಲೇಷಿಸಿದರು.
ಕಾಲೇಜಿನ ಪ್ರಾಂಶುಪಾಲ ಕೆ.ಗುರುರಾಜ್‌ಪ್ರಭು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಕೆ.ಚಂದ್ರಕಾಂತ್, ಕೇಂದ್ರದ ಸಂಚಾಲಕ ಕೆ.ಎಂ.ಕೃಷ್ಣೇಗೌಡ ಕೀಲಾರ, ಉಪನ್ಯಾಸಕರಾದ ಎಸ್.ಬಿ.ಜ್ಯೋತಿ, ವಿ.ಶಿವಕೀರ್ತಿ, ಎಚ್.ಎಸ್.ನಿಂಗರಾಜು, ಶರ್ಮಿಳಾ, ರವಿಕುಮಾರ್ ಇತರರಿದ್ದರು.