

ದಾವಣಗೆರೆ: ಜಿಲ್ಲಾ ಕುರುಬ ಸಮಾಜ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಭಾನುವಾರ ಹಮ್ಮಿಕೊಂಡಿರುವ 537ನೇ ಕನಕದಾಸರ ಜಯಂತ್ಯುತ್ಸವಕ್ಕೆ ನಗರದ ಹೈಸ್ಕೂಲ್ ಮೈದಾನ ಸಕಲ ರೀತಿಯಲ್ಲಿ ಸಜ್ಜಾಗಿದೆ.
ಬೃಹದಾಕಾರದ ಪೆಂಡಾಲ್ ನಿರ್ವಿುಸಲಾಗಿದ್ದು, ವೇದಿಕೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕನಕದಾಸರ ಪುತ್ಥಳಿಯನ್ನು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅನಾವರಣಗೊಳಿಸಲಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್, ಕಾರ್ವಿುಕ ಸಚಿವ ಸಂತೋಷ್ ಎಸ್. ಲಾಡ್, ಶಿವರಾಜ ಎಸ್.ತಂಗಡಗಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಎಚ್.ಎಂ.ರೇವಣ್ಣ, ಶಾಸಕ ಶಾಮನೂರು ಶಿವಶಂಕರಪ್ಪ, ಶಾಸಕ ಬಿ.ಪಿ.ಹರೀಶ್ ಇತರರು ಪಾಲ್ಗೊಳ್ಳಲಿದ್ದಾರೆ.
ಮನವಿ: ಕುರುಬರ ವಿದ್ಯಾರ್ಥಿಗಳ ವಸತಿ ನಿಲಯದ ಕಟ್ಟಡಕ್ಕೆ 70 ವರ್ಷಗಳು ಕಳೆದಿವೆ. ಇದರ ಪುನರ್ ನಿರ್ವಣಕ್ಕಾಗಿ ಅನುದಾನ, ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಸಿಬಿಎಸ್ಸಿ ಶಾಲೆಯ ಸಂಪೂರ್ಣ ಕಟ್ಟಡ ನಿರ್ವಣಕ್ಕಾಗಿ ಹೆಚ್ಚಿನ ಆರ್ಥಿಕ ನೆರವು, ಜಿಎಂಐಟಿ ಸಂಸ್ಥೆ ಬಳಿ ಇರುವ ಕುರುಬ ಸಮಾಜದ ನಿವೇಶನದಲ್ಲಿ ಕನಕ ಭವನ ನಿರ್ವಿುಸಲು ಸರ್ಕಾರದಿಂದ ಅನುದಾನ ಹಾಗೂ ಕಾಂತರಾಜ್ ವರದಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಳಿ ಮನವಿ ಪತ್ರ ನೀಡಲಾಗುವುದು.
ಸನ್ಮಾನ: ಬಿಎಸ್ಎಫ್ ಸಂಸ್ಥಾಪನಾ ದಿನದಂದು ‘ಏಕತಾ ದಿವಸ್’ ಪ್ರಧಾನಿ ಸಮ್ಮುಖದಲ್ಲಿ ಯಶಸ್ವಿಯಾಗಿ ಕಮಾಂಡ್ ನಿರ್ವಹಿಸಿದ ದಕ್ಷಿಣ ಭಾರತದ ಮೊದಲ ಮಹಿಳಾ ಕಮಾಂಡೆಂಟ್ ಡಾ.ಎಂ.ಎಲ್.ಮೃದಲಾ ಅವರನ್ನು ಸನ್ಮಾನಿಸಲಾಗುವುದು.
ಸ್ವಾಮೀಜಿಗಳ ಉಪಸ್ಥಿತಿ: ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗದ ಈಶ್ವರಾನಂದಪುರಿ ಸ್ವಾಮೀಜಿ, ತಿಂತಿಣಿ ಮಠದ ಸಿದ್ಧರಾಮನಂದಪುರಿ ಸ್ವಾಮೀಜಿ, ಮೈಸೂರು ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ, ಹದಡಿ ಮಠದ ಮುರಳೀಧರ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚನ್ನಯ್ಯ ಶ್ರೀ ಸಾನ್ನಿಧ್ಯ ವಹಿಸಲಿದ್ದಾರೆ.
ಮೆರವಣಿಗೆ: ಬೆಳಗ್ಗೆ 9.30ಕ್ಕೆ ನಗರದ ದುರ್ಗಾಂಬಿಕಾ ದೇವಸ್ಥಾನದಿಂದ ಸಭಾ ಕಾರ್ಯಕ್ರಮ ನಡೆಯಲಿರುವ ಹೈಸ್ಕೂಲ್ ಮೈದಾನದವರೆಗೆ ಕನಕದಾಸರ ಪ್ರತಿಮೆಯೊಂದಿಗೆ ಮೆರವಣಿಗೆ ನಡೆಸಲಾಗುವುದು. ಕಲಾ ವಾದ್ಯಗಳು ಮೆರವಣಿಗೆಯ ರಂಗನ್ನು ಹೆಚ್ಚಿಸಲಿವೆ. ನೂರಾರು ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಆಯುಕ್ತೆ ರೇಣುಕಾ, ಮಾಜಿ ಶಾಸಕ ಎಸ್.ರಾಮಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಭಾಗವಹಿಸಲಿದ್ದಾರೆ.
ಕಂಗೊಳಿಸಿದ ಹಳದಿ ರುಮಾಲು: ದಾಸಶ್ರೇಷ್ಠರ ಜಯಂತ್ಯುತ್ಸವಕ್ಕೆ ಪೂರ್ವಭಾವಿಯಾಗಿ ಶನಿವಾರ ನಗರದ ಪ್ರಮುಖ ಬೀದಿಗಳಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು, ಕುರುಬ ಸಮಾಜ, ಹಿಂದುಳಿದ ವರ್ಗದ ಮುಖಂಡರು, ಕಾರ್ಯಕರ್ತರು ಜಾಗೃತಿ ಜಾಥಾ ನಡೆಸಿದರು.
ಕಾಳಿದಾಸ ವೃತ್ತದಿಂದ ಹೊರಟ ಬೈಕ್ ರ್ಯಾಲಿ, ಡಿಸಿಎಂ ವೃತ್ತ, ಶ್ರೀರಾಮ ಬಡಾವಣೆ, ಶಿವಪ್ಪ ಸರ್ಕಲ್, ತ್ರಿಶೂಲ್ ರಸ್ತೆ ಸೇರಿದಂತೆ ಇತರೆರೆ ಸಂಚರಿಸಿ ಸಂಗೊಳ್ಳಿ ರಾಯಣ್ಣ ಸರ್ಕಲ್ನಲ್ಲಿ ಮುಕ್ತಾಯವಾಯಿತು. ನೂರಾರು ಅಭಿಮಾನಿಗಳು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾ ಕನಕದಾಸರಿಗೆ ಜೈಕಾರ ಕೂಗಿದರು. ಮಹಿಳೆಯರು, ಮುಖಂಡರು ರಾಯಣ್ಣನ ಚಿತ್ರವಿರುವ ಹಳದಿ ಶಾಲು ಹಾಗೂ ರುಮಾಲು ಧರಿಸಿ ಕಂಗೊಳಿಸಿದರು.
ಜಯಂತ್ಯುತ್ಸವಕ್ಕೆ ಆಗಮಿಸುವ ಅಭಿಮಾನಿಗಳ ವಾಹನ ನಿಲುಗಡೆಗೆ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ಬಳಸಿಕೊಳ್ಳಲಾಗುವುದು. ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. | ನಂದಿಗಾವಿ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಜಿಲ್ಲಾ ಕೇಂದ್ರದಲ್ಲಿನ ಹಿಂದುಳಿದ ವರ್ಗದವರೆಲ್ಲರೂ ಒಗ್ಗೂಡಬೇಕು. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬುವ ಕೆಲಸ ಈ ಜಯಂತ್ಯುತ್ಸವದಿಂದ ಆಗಲಿದೆ ಎನ್ನುವ ನಂಬಿಕೆಯಿದೆ. | ಹಾಲೇಕಲ್ ಅರವಿಂದ್, ಅಧ್ಯಕ್ಷ, ಜಿಲ್ಲಾ ಕನಕ ಯುವಕರ ಬಳಗ