

ವಿಜಯವಾಣಿ ಸುದ್ದಿಜಾಲ ಉಡುಪಿ
ಶ್ರೇಷ್ಠ ದಾಸ ಕನಕದಾಸರ ಕೀರ್ತನೆಗಳಲ್ಲಿ ಸಮ ಸಮಾಜ ಸ್ಥಾಪನೆಯ ಉದ್ದೇಶ ಕಂಡು ಬರುತ್ತವೆ. ತನ್ನ ಕೀರ್ತನೆಯ ಮೂಲಕ ಕುಲಕ್ಕಿಂತ ಭಕ್ತಿಯೇ ಮಿಗಿಲು ಎಂಬ ಸಂದೇಶ ಪ್ರತಿಪಾದಿಸಿದ್ದರು. ಆದರೆ, ಇಂದು ಸುಶಿಕ್ಷಿತರ ಸಂಖ್ಯೆ ಹೆಚ್ಚುತ್ತಿದ್ದರೂ ಜಾತಿ-ಜಾತಿಗಳ ನಡುವೆ ಪೈಪೋಟಿ, ಮೀಸಲಾತಿ, ಹಿಂದುಳಿದವರು ಎನ್ನುತ್ತ ಸರ್ಕಾರಿ ಸೌಲಭ್ಯಕ್ಕಾಗಿ ಹಾತೊರೆಯುತ್ತಿದ್ದಾರೆ ಎಂದು ಶಿಕ್ಷಣ ತಜ್ಞ, ಹಿರಿಯ ಸಾಹಿತಿ ಮಹಾಬಲೇಶ್ವರ ರಾವ್ ವಿಷಾದ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕನಕದಾಸ ಅಧ್ಯಯನ ಸಂಶೋಧನಾ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲ ಆಶ್ರಯದಲ್ಲಿ ಶನಿವಾರ (ನ.8) ಆಯೋಜಿಸಿದ್ದ ಕನಕ ಜಯಂತಿ-ಕನಕ ಕೀರ್ತನೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಂಜಿಎಂ ಕಾಲೇಜಿನ ಗಾಂಧಿಯನ್ ಸೆಂಟರ್ನ ಮುಖ್ಯಸ್ಥ ವಿನೀತ್ ರಾವ್ ಮಾತನಾಡಿ, ಎಂಜಿಎಂ ಕಾಲೇಜಿನ ಲಾಂಛನವೂ ಸಹ ಕನಕದಾಸರಿಗೂ ಉಡುಪಿಗೂ ಇರುವ ಭಕ್ತಿಯ ನಂಟಿನ ಸಂಕೇತದ ರೂಪದಲ್ಲಿಯೇ ಇದೆ ಎಂದು ತಿಳಿಸಿದರು.
ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕನಕದಾಸ ಪೀಠದ ಸಹ ಸಂಶೋಧಕ ಅರುಣ್ ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರ್ವಹಿಸಿದರು.
ಕನಕದಾಸ ಅಧ್ಯಯನ ಪೀಠಕ್ಕೆ ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಆದರೂ ಉಡುಪಿಯಲ್ಲಿರುವ ಕನಕ ಪೀಠವು ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಕನಕದಾಸರನ್ನು ಜೀವಂತವಾಗಿ ಇಟ್ಟಿದೆ. ಆದರೆ, ಕನಕರನ್ನು ಉಡುಪಿ ಮರೆತಂತಿದೆ. ನಾಡಿನ ಎಲ್ಲ ಶ್ರದ್ಧಾ ಕೇಂದ್ರಗಳು ವ್ಯಾಪಾರೀಕರಣಗೊಂಡಿವೆ. ಹೀಗಾಗಿ ಐತಿಹ್ಯಗಳಿಗೆ ಮರುಳಾಗದೆ ವಾಸ್ತವಿಕತೆಯತ್ತ ಸಾಗುವ ಅಗತ್ಯತೆ ಇದೆ. | ಮಹಾಬಲೇಶ್ವರ ರಾವ್. ಶಿಕ್ಷಣ ತಜ್ಞ.