ಎಚ್.ಡಿ.ಕೋಟೆಯಲ್ಲಿ ಕನಕ ಜಯಂತಿ

08HDK05
ಎಚ್.ಡಿ.ಕೋಟೆ ಪಟ್ಟಣದ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಕುಮಾರ್ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಶ್ರೀನಿವಾಸ್, ಧರಣೀಶ್ ಇತರರು ಇದ್ದರು.
Published on

ಎಚ್.ಡಿ.ಕೋಟೆ : ಕನಕದಾಸರ ಆದರ್ಶವನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸಮಾಜದಲ್ಲಿನ ಸಮಾನತೆ ನಿರ್ಮಿಸಲು ಕೈಜೋಡಿಸೋಣ ಎಂದು ಶಾಸಕ ಅನಿಲ್ ಕುಮಾರ್ ಹೇಳಿದರು.

ಪಟ್ಟಣದ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಅಂಕುಡೊಂಕು ಸರಿಪಡಿಸಿದವರು ಕನಕದಾಸರು. ಶ್ರೀ ಮನ್ ನಾರಾಯಣ ಕನಕದಾಸರ ಭಕ್ತಿಗೆ ಮೆಚ್ಚಿದ ಗುರುತಾಗಿ ಉಡುಪಿಯಲ್ಲಿ ಕನಕನ ಕಿಂಡಿ ಹೆಸರುವಾಸಿಯಾಗಿರುವುದನ್ನು ಕಾಣಬಹುದು ಎಂದರು.

ಮಕ್ಕಳಿಗೆ ಆಸ್ತಿ ಕೊಡಬಹುದು. ಆದರೆ ವಿದ್ಯೆ ಕೊಡಬೇಕಾದರೆ ಕಷ್ಟ. ಹಾಗಾಗಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ಮಹನೀಯರ ಜಯಂತಿ ಕಾರ್ಯಕ್ರಮವನ್ನು ಅಂಬೇಡ್ಕರ್ ಭವನದಲ್ಲಿ ಮಾಡಲು ತೀರ್ಮಾನಿಸಲಾಗಿದೆ. ತಾಲೂಕು ಆಡಳಿತದ ವತಿಯಿಂದ ಫ್ಲೆಕ್ಸ್ ಮಾಡುವಾಗ ಮಹನೀಯರ ಭಾವಚಿತ್ರವನ್ನು ಮಾತ್ರ ಹಾಕಿ ಎಂದು ಸಲಹೆ ನೀಡಿದರು.

ಸಾಹಿತಿ ಹಾಗೂ ಶಿಕ್ಷಕ ಕಿರಣ್ ಶಿಡ್ಲೇಹಳ್ಳಿ ಮಾತನಾಡಿ, ವ್ಯಾಸರಾಯರ ಶ್ರೇಷ್ಠ ಶಿಷ್ಯ ಕನಕದಾಸ ಭೋಗ ಜೀವನದ ಆಚೆ ಬದುಕು ಕಂಡುಕೊಂಡವರು. ಕನಕದಾಸರ ವಿಭೂತಿ ಪುರುಷನಾಗಿ ಮಾರ್ಪಾಡು ಆದವರು ಎಂದು ಬಣ್ಣಿಸಿದರು.

ಸಮಾಜದಲ್ಲಿ ಮನೆ ಮಾಡಿರುವ ಸಾಮಾಜಿಕ ಪಿಡುಗುಗಳನ್ನು ನಿವಾರಿಸಲು ಹಾಡು, ಭಜನೆ, ಕೀರ್ತನೆಗಳ ಮೂಲಕ ಸಮಾಜವನ್ನು ಎಚ್ಚರಿಸಿದವರು ಕನಕದಾಸರು. ಕನಕದಾಸರ ಬಗ್ಗೆ 315 ಪುಟಗಳ ದಾಖಲೆ ಇದ್ದರೂ ಮತ್ತಷ್ಟ ಅಧ್ಯಯನಗಳು ನಡೆಯಬೇಕಿದೆ. ಜಯಂತಿ ಕಾರ್ಯಕ್ರಮಗಳು ಆಚರಣೆಗೆ ಸೀಮಿತವಾಗದೆ ಅವರ ವಿಚಾರಧಾರೆಯನ್ನು ಯುವಪೀಳಿಗೆಗೆ ಬಿತ್ತರಿಸುವ ಕೆಲಸವನ್ನು ಮಾಡಬೇಕಿದೆ ಎಂದರು.

ತಹಸೀಲ್ದಾರ್ ಶ್ರೀನಿವಾಸ್, ಇಒ ಧರಣೀಶ್, ಜಿ.ಆರ್.ಮಹೇಶ್, ಕುರಬ ಸಮಾಜದ ಎಂ.ಬಿ ಆನಂದ್, ಮಾಲೇಗೌಡ, ಕುಮಾರೇಗೌಡ, ಶಶಿಕಲಾ, ನೇತ್ರಾವತಿ, ಕಿರಣ್ ಶಿಡ್ಲೇಹಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net