ಕೂಡ್ಲೂರು ಪ್ರೌಢಶಾಲೆಯಲ್ಲಿ ಕನಕ ಜಯಂತಿ

30Kush05 KANAKA
Published on

ಕುಶಾಲನಗರ: ಕುಶಾಲನಗರ ಸಮೀಪದ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಶಾಲೆಯ ಕನ್ನಡ ಭಾಷಾ ಸಂಘ ಹಾಗೂ ವಿದ್ಯಾರ್ಥಿ ಸಂಘದ ವತಿಯಿಂದ ಭಕ್ತ ಕನಕದಾಸರ ಜಯಂತಿ ಆಚರಿಸಲಾಯಿತು.
ಕನಕದಾಸರ ಜೀವನ ಚರಿತ್ರೆ ಹಾಗೂ ಬದುಕು ಕುರಿತು ಮಾಹಿತಿ ನೀಡಿದ ಶಾಲೆಯ ಕನ್ನಡ ಭಾಷಾ ಶಿಕ್ಷಕ ಕೆ.ಗೋಪಾಲಕೃಷ್ಣ, ದಾಸರಲ್ಲಿಯೇ ಕನಕದಾಸರು ಅತ್ಯಂತ ಶ್ರೇಷ್ಠರು. ಉಳಿದ ಸಮುದಾಯಕ್ಕೆ ಮಾರ್ಗದರ್ಶಕರಾಗಿದ್ದರು. ವಿದ್ಯಾರ್ಥಿಗಳು ಅವರ ತತ್ತ್ವಾದರ್ಶ ಅಳವಡಿಸಿಕೊಳ್ಳಬೇಕು ಎಂದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ ಮಾತನಾಡಿ, ಕನಕದಾಸರು ಸಾಮಾಜಿಕ ಸಮಾನತೆ ಮತ್ತು ಧಾರ್ಮಿಕ ಸಹಿಷ್ಣುತೆಯನ್ನು ಉತ್ತೇಜಿಸುವಲ್ಲಿ ಪ್ರವರ್ತಕರಾಗಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ ಮಾತನಾಡಿ, ವಿದ್ಯಾರ್ಥಿಗಳು ಸಂತರ ಜೀವನ ಆದರ್ಶ ಹಾಗೂ ತತ್ವಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.
ಶಿಕ್ಷಕಿಯರಾದ ಸುಜಾತಾ, ರೇಖಾ, ಶಾಲಾ ನಾಯಕಿ ಐಶ್ವರ್ಯಾ, ಉಪ ನಾಯಕ ಕೆ.ಎಂ.ಗೌತಮ್ ಇದ್ದರು. ವಿದ್ಯಾರ್ಥಿಗಳು ಕನಕದಾಸರ ಕೀರ್ತನೆಗಳನ್ನು ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net