

ಹುಬ್ಬಳ್ಳಿ: ದೇಶದಲ್ಲಿ ಮಹಿಳೆಯರಿಂದ ಮಾತ್ರ ಧರ್ಮ ಉಳಿಯಲು ಸಾಧ್ಯ. ಇದಕ್ಕಾಗಿ 3500 ಮಹಿಳಾ ಭಜನಾ ಮಂಡಳಿಗಳ ಸ್ಥಾಪನೆ ಮಾಡಿದ್ದೇವೆ. ಭಾರತೀಯರಾಗಿ ಹುಟ್ಟಿದ ನಾವು ಪಾಶ್ಚಾತ್ಯ ಸಂಸ್ಕೃತಿಗೆ ಮನಸೋಲದೇ ಮಕ್ಕಳಿಗೆ ಆಧ್ಯಾತ್ಮಿಕತೆಯ ಸಾರ ತಿಳಿಸಿಕೊಡಬೇಕು ಎಂದು ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರೊಜೆಕ್ಟ್ ವಿಶೇಷಾಧಿಕಾರಿ ಕೆ. ಅಪ್ಪಣ್ಣಾಚಾರ್ಯರು ಹೇಳಿದರು.
ಇಲ್ಲಿಯ ಭವಾನಿನಗರ ಶ್ರೀ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಂಯುತಾ ಪ್ರತಿಷ್ಠಾನದಿಂದ ಪಂ. ದಾಮೋದರಾಚಾರ್ಯ ಉರ್ಮಜಿ ಸ್ಮರಣಾರ್ಥ ಬುಧವಾರ ಆಯೋಜಿಸಿದ್ದ ಕನಕ- ಪುರಂದರೋತ್ಸವ ಕಾರ್ಯಕ್ರಮದಲ್ಲಿ ಅವರು ಸಂಯುತಾ ಪುರಂದರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ದೇಶ, ಭಾಷೆ ಹಾಗೂ ಧರ್ಮಕ್ಕಾಗಿ ನಮ್ಮಲ್ಲಿ ತುಡಿತ ಇರಬೇಕು. ಯಾವುದೇ ಧರ್ಮವನ್ಜು ಅನುಕರಣೆ ಮಾಡಿದರೂ ಬೇರೆ ಧರ್ಮದ ನಿಂದನೆ ಮಾಡಬಾರದು. ದಶಕಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನೆಯಾಗಿದೆ. ಅದರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಧರ್ಮ ಮತ್ತು ದೇಶದ ರಕ್ಷಣೆಗಾಗಿ ನಾವೆಲ್ಲ ಒಂದಾಗಬೇಕು ಎಂದರು.
ಗೋಪಾಳ ಬುಟ್ಟಿಗೆ ಮೂರು ಮುಷ್ಟಿ ಅಕ್ಕಿ ಸಮರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ, ಕನಕದಾಸರು ಮತ್ತು ಪುರಂದರದಾಸರು ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಜಾತಿ ಪದ್ಧತಿ ವಿರುದ್ಧ ಕನಕದಾಸರು ಚಳವಳಿಯನ್ನೇ ಮಾಡಿದವರು. ಆಗರ್ಭ ಶ್ರೀಮಂತರಾಗಿದ್ದ ಪುರಂದರದಾಸರು ಸಕಲ ಸಂಪತ್ತನ್ನೂ ದಾನ ಮಾಡಿ ವೈರಾಗ್ಯ ಮತ್ತು ಧರ್ಮ ಜಾಗೃತಿಯ ಕ್ರಾಂತಿಯ ಮಾರ್ಗ ತೋರಿಸಿಕೊಟ್ಟವರು ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಮುರಳೀಧರ ಮಳಗಿ, ಕನಕದಾಸ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶಾಂತಣ್ಣ ಕಡಿವಾಲ ಮಾತನಾಡಿದರು.
ಸಂಯುತಾ ಪ್ರತಿಷ್ಠಾನದ ಅಧ್ಯಕ್ಷ ಪ್ರಹ್ಲಾದ ಪರ್ವತಿ, ಉಪಾಧ್ಯಕ್ಷ ಗಣಪತಿ ಗಂಗೊಳ್ಳಿ, ಗೌರವಾಧ್ಯಕ್ಷ ಎ.ಸಿ. ಗೋಪಾಲ, ಭವಾನಿನಗರ ರಾಯರ ಮಠದ ವ್ಯವಸ್ಥಾಪಕ ಕೆ. ವೇಣುಗೋಪಾಲಾಚಾರ್ಯ, ಎಂಕೆಬಿಎಸ್ ಜಿಲ್ಲಾ ಸಂಚಾಲಕ ಬಿಂದು ಮಾಧವ ಪುರೋಹಿತ, ಗೋಪಾಲ ಕುಲಕರ್ಣಿ, ಸಹ ಕಾರ್ಯದರ್ಶಿ ಸುಶಿಲೇಂದ್ರ ಕುಂದರಗಿ, ಕಾರ್ಯದರ್ಶಿ ಮನೋಹರ ಪರ್ವತಿ, ಪ್ರಧಾನ ಕಾರ್ಯದರ್ಶಿ ಜನಮೇಜಯ ಉರ್ಮಜಿ ಇತರರು ಉಪಸ್ಥಿತರಿದ್ದರು.