

ಕಾನಹೊಸಹಳ್ಳಿ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಸಮಾಜದಲ್ಲಿ ಶ್ರೇಷ್ಠ ಸ್ಥಾನ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ನಿವೃತ್ತ ಜಂಟಿ ನಿರ್ದೇಶಕ ವೀರಣ್ಣ ಎಸ್.ಜತ್ತಿ ಹೇಳಿದರು.
ಮಡಕಲಕಟ್ಟೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.ಕೂಡ್ಲಿಗಿ ತಾಲೂಕಿನಲ್ಲಿ ಬಿಇಒ ಆಗಿದ್ದಾಗ ಈ ಶಾಲೆಯ ಶೈಕ್ಷಣಿಕ ಪ್ರಗತಿ ಮಾದರಿಯಾಗಿತ್ತು. ಕಲಿಕಾ ಖಾತ್ರಿ ಯೋಜನೆಯಲ್ಲಿ ಕಲಬುರಗಿ ವಿಭಾಗದಲ್ಲೇ ಕೂಡ್ಲಿಗಿ ತಾಲೂಕು ಪ್ರಥಮ ಸ್ಥಾನ ಪಡೆಯಲು ಮಡಕಲಕಟ್ಟೆ ಗ್ರಾಮದ ಶಾಲೆಯೇ ಪ್ರೇರಣೆಯಾಗಿತ್ತು ಎಂದು ಸ್ಮರಿಸಿದರು.
ಸಾನ್ನಿಧ್ಯ ವಹಿಸಿದ್ದ ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ ಪ್ರಶಾಂತ ಸಾಗರ ಸ್ವಾಮೀಜಿ ಮಾತನಾಡಿ, ಹೆತ್ತವರು ಮತ್ತು ಶಿಕ್ಷಕರು ಮಾತ್ರ ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸುತ್ತಾರೆ. ಸಮಾಜವನ್ನು ಸರಿದಾರಿಯಲ್ಲಿ ನಡೆಸುವಂಥ ನಾಗರಿಕರನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ವಿದ್ಯೆ ಕಲಿಸಿದ ಗುರುಗಳಿಗೆ ಗೌರವಿಸುವ ಸಂಸ್ಕಾರವನ್ನು ಶಿಷ್ಯರು ಹೊಂದಬೇಕು ಎಂದರು.
ಕೂಡ್ಲಿಗಿ ಬಿಇಒ ಪದ್ಮನಾಭ ಕರ್ಣಂ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಾಲ್ತೂರು ಶಿವರಾಜ, ಶಾಲೆ ಶಿಕ್ಷಕ ಮಹಾಂತೇಶ್, ನಿವೃತ್ತ ಮುಖ್ಯಶಿಕ್ಷಕ ತಳವಾರ ಶರಣಪ್ಪ, ಶಿಕ್ಷಕ ಪ್ರದೀಪ್ ಕುಮಾರ್ ಮಾತನಾಡಿದರು. ಮಡಕಲಕಟ್ಟೆ ಗ್ರಾಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ಯಾಮ್ ಸುಂದರ್ ಸಫಾರೆ, ಗೋಪಾಲ ನಾಯ್ಕ, ಮಹೇಶ್ವರಯ್ಯ, ಸಿ.ಪ್ರಕಾಶ್ ಸೇರಿ ಇತರರನ್ನು ಹಳೇ ವಿದ್ಯಾರ್ಥಿಗಳ ಬಳಗದಿಂದ ಸನ್ಮಾನಿಸಲಾಯಿತು.