

ಕಾನಹೊಸಹಳ್ಳಿ: ನಿರಂತರ ಮಳೆಯಿಂದ ಕೆರೆ ಭರ್ತಿಯಾಗಿ ಪಕ್ಕದಲ್ಲಿರುವ ಪಾಲಯ್ಯನಕೋಟೆ ಸಹಿಪ್ರಾ ಶಾಲಾವರಣ ಜಲಾವೃತವಾಗಿದ್ದು, ತಹಸೀಲ್ದಾರ್ ವಿ.ಕೆ.ನೇತ್ರಾವತಿ ಸಿಬ್ಬಂದಿಯೊಂದಿಗೆ ಬುಧವಾರ ಗ್ರಾಮದ ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಶಾಲೆಗೆ ರಜೆ ಇರುವ ಕಾರಣ ಕಟ್ಟಡಕ್ಕೆ ಹೊರತುಪಡಿಸಿ ಬೇರೆ ಯಾವುದೇ ತೊಂದರೆಯಾಗಿಲ್ಲ. ಕಟ್ಟಡ ಸ್ಥಳಾಂತರ ಮಾಡುವ ಅವಶ್ಯ ಇದ್ದು, ಶಾಸಕರ ಗಮನಕ್ಕೆ ಮಾಹಿತಿ ತಂದಿರುವೆ ಎಂದರು.
ಗ್ರಾಮಕ್ಕೆ ಹೊಂದಿಕೊಂಡು ಕೆರೆ ಇದ್ದು, ಕೆರೆಯಂಗಳದಲ್ಲೇ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಹಲವು ವರ್ಷಗಳ ನಂತರ ಈ ಕೆರೆ ಭರ್ತಿಯಾಗಿದೆ. ಇದರಿಂದಾಗಿ ಶಾಲಾ ಕಟ್ಟಡ ಜಲಾವೃತವಾಗಿದೆ. ಈಗಿರುವ ಕಟ್ಟಡ 25 ವರ್ಷಗಳ ಹಿಂದಿನದ್ದಾಗಿದೆ. ಶಾಲೆ ಬೇರೆಡೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಶಾಲೆ ಕಟ್ಟಡಕ್ಕೆ ತಡೆಗೋಡೆ ನಿರ್ಮಿಸುವಂತೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್‌ಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ ಶಾಸಕರು ತಡೆಗೋಡೆ ನಿರ್ಮಿಸಲು 50 ಲಕ್ಷ ರೂ. ನೀಡಿದ್ದರು. ಆದರೆ, ಕಾಮಗಾರಿ ಆರಂಭವಾಗಿಲ್ಲ.
ಕೆರೆ ನೀರಿನ ಪ್ರಮಾಣ ಕಡಿಮೆಯಾದ ಮೇಲೆ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ ಎಂದು ಗ್ರಾಮಸ್ಥರು ತಿಳಿಸಿದರು. ಕಂದಾಯ ನಿರೀಕ್ಷಕ ಕೊಟ್ರೇಶ್, ಮೋಹಿನ್ ಇದ್ದರು.