ಆರು ತಿಂಗಳಿಂದ ಅಂಗನವಾಡಿ ಕೇಂದ್ರಕ್ಕೆ ಗ್ರಾಮಸ್ಥರಿಂದ ಬೀಗ

Khanahossali Anganwadi center
ಅಂಗನವಾಡಿ ಕಾರ್ಯಕರ್ತೆಯಾಗಿ ಸ್ಥಳಿಯರನ್ನೇ ನೇಮಕ ಮಾಡುವಂತೆ ಪಿಚ್ಚಾರಹಟ್ಟಿ ಗೊಲ್ಲರಹಟ್ಟಿ ಗ್ರಾಮಸ್ಥರು ಅಧಿಕಾರಿಗಳನ್ನು ಆಗ್ರಹಿಸುತ್ತಿರುವುದು.
Published on

ಕಾನಹೊಸಹಳ್ಳಿ: ನಮ್ಮೂರಿನವರೇ ಕಾರ್ಯಕರ್ತೆ ಆಗಬೇಕು ಎಂದು ಅಂಗನವಾಡಿ ಕೇಂದ್ರಕ್ಕೆ ಗ್ರಾಮಸ್ಥರು ಬೀಗ ಹಾಕಿರುವ ಘಟನೆ ಪಿಚ್ಚಾರಹಟ್ಟಿ ಗೊಲ್ಲರಹಟ್ಟಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕೆಂಚಮಲ್ಲನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಸ್.ಶಾಂಭಕ್ಕ ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2024ರ ಜೂ.19 ರಂದು ಬಡ್ತಿ ನೀಡಿ ಪಿಚ್ಚಾರಹಟ್ಟಿ ಗೊಲ್ಲರಹಟ್ಟಿ ಕೇಂದ್ರಕ್ಕೆ ನಿಯೋಜನೆ ಮಾಡಿ ಜೂ.26ರಿಂದ ಕೆಲಸಕ್ಕೆ ಹಾಜರಾಗುವಂತೆ ಆದೇಶಿಸಿದೆ.

ಪಿಚ್ಚಾರಹಟ್ಟಿ ಗೊಲ್ಲರಹಟ್ಟಿ ಕೇಂದ್ರಕ್ಕೆ ಹಾಜರಾದ ಶಾಂಭಕ್ಕಗೆ ಕೆಲಸ ಮಾಡಲು ಬಿಡದ ಗ್ರಾಮಸ್ಥರು ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ ಸ್ಥಳೀಯರನ್ನು ಕಾರ್ಯಕರ್ತೆಯಾಗಿ ನಿಯೋಜಿಸುವಂತೆ ಕಳೆದ ಆರು ತಿಂಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಗ್ರಾಮಸ್ಥರು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸುತ್ತಿಲ್ಲ. ಕೇಂದ್ರದ ಬಾಗಿಲಿಗೆ ಬೀಗ ಹಾಕಿದ್ದಾರೆ. ಇದರಿಂದಾಗಿ ಶಾಂಭಕ್ಕ ಕೇಂದ್ರಕ್ಕೆ ಅಗಮಿಸಿ ಹೊರಗೆ ಕುಳಿತು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುತ್ತಿದ್ದಾರೆ. ಈ ವಿಷಯವನ್ನು ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಆದರೆ, ವಿವಾದ ಇದುವರೆಗೆ ಬಗೆಹರಿದಿಲ್ಲ. ಮನವೊಲಿಕೆಗೆ ಸ್ಪಂದಿಸದ ಗ್ರಾಮಸ್ಥರು ಸಿಡಿಪಿಒ ಮಾಲನ್‌ಬಿ ಮತ್ತು ಕಾನಹೊಸಹಳ್ಳಿ ಪೊಲೀಸರು ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಈ ಕುರಿತು ಮಾಹಿತಿ ಪಡೆದರು.

ಇಲಾಖೆಯ ಹಿಂದಿನ ಅಧಿಕಾರಿ ತಪಸ್ವಿನಿ ನಮ್ಮೂರಿನ ಕುಸುಮ ಎಂಬುವವರನ್ನು ಗೌರವಧನ ಆಧಾರದ ಮೇಲೆ ಕಾರ್ಯಕರ್ತೆಯಾಗಿ ನೇಮಕ ಮಾಡಿದ್ದರು. ಕುಸಮ 7 ತಿಂಗಳು ಕೆಲಸ ಮಾಡಿದ್ದು, ಅವರನ್ನೇ ಕಾಯಂ ಮಾಡಬೇಕು. ಶಾಂಭಕ್ಕ ಅವರನ್ನು ಅವರ ಸ್ವಗ್ರಾಮ ಇಲ್ಲವೇ ಬೇರೆಡೆ ಖಾಲಿ ಇರುವ ಸ್ಥಳದಲ್ಲಿ ನಿಯೋಜಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಅಧಿಕಾರಿಗಳ ಮನವೊಲಿಕೆಗೆ ಸ್ಪಂದಿಸದ ಜನರು ಕೇಂದ್ರಕ್ಕೆ ಮಕ್ಕಳನ್ನು ಕಳಿಸುವುದಿಲ್ಲವೆಂದು ತಿಳಿಸಿದರು. ಗ್ರಾಮಸ್ಥರ ವಿರೋಧದ ನಡುವೆಯೇ ಸಿಡಿಪಿಒ ಮತ್ತು ಪೊಲೀಸರು ಅಂಗನವಾಡಿ ಕೇಂದ್ರದ ಬೀಗ ತೆರೆದರು. ಕಾರ್ಯಕರ್ತೆಯರಾದ ಚಂದ್ರಮ್ಮ, ಶಾಂಭಕ್ಕ ಇದ್ದರು.

ಸರ್ಕಾರದ ಆದೇಶದಂತೆ ಶಾಂಭಕ್ಕ ಅವರನ್ನು ಪಿಚ್ಚಾರಹಟ್ಟಿ ಗೊಲ್ಲರಹಟ್ಟಿಗೆ ನಿಯೋಜಿಸಲಾಗಿದೆ. ಗ್ರಾಮಸ್ಥರಿಗೆ ಕಾನೂನಿನ ತಿಳಿವಳಿಕೆ ಹೇಳಲಾಗುವುದು. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕಾನೂನು ಪ್ರಕಾರ ಕಾರ್ಯಕರ್ತೆಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗುವುದು. ಮಾಲನ್‌ಬಿ ಸಿಡಿಪಿಒ, ಕೂಡ್ಲಿಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net