

ಕಾನಹೊಸಹಳ್ಳಿ: ಗ್ರಾಮದ ಗಾಣಿಗರ ಸಮುದಾಯ ಭವನದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಏ.19ರಂದು ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮ ನಿಗದಿಯಾಗಿದ್ದು, ಸಕಲ ಸಿದ್ಧತೆ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ತಹಸೀಲ್ದಾರ್ ವಿ.ಕೆ.ನೇತ್ರಾವತಿ ಸೂಚಿಸಿದರು.
ಗ್ರಾಪಂ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯಲ್ಲಿ ಗುರುವಾರ ಮಾತನಾಡಿದರು. ಜನಸ್ಪಂದನ ಕಾರ್ಯಕ್ರಮಕ್ಕೆ ಹೋಬಳಿ ವ್ಯಾಪ್ತಿಯ ಹಳ್ಳಿಗಳಿಂದ ಅಂದಾಜು 500ಕ್ಕೂ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆಯಿದೆ. ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲು ಕೌಂಟರ್‌ಗಳು, ನೆರಳು, ಕುಡಿವ ನೀರಿನ ವ್ಯವಸ್ಥೆ ಮಾಡಬೇಕು. ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕಾರ್ಯಕ್ರಮದ ಕುರಿತು ಪ್ರಚಾರ ನಡೆಸಬೇಕು ಎಂದು ತಿಳಿಸಿದರು.
ಸ್ಥಳ ಪರಿಶೀಲನೆ: ಪೂರ್ವಭಾವಿ ಸಭೆಯ ನಂತರ ತಹಸೀಲ್ದಾರ್ ವಿ.ಕೆ.ನೇತ್ರಾವತಿ, ತಾಪಂ ಇಒ ನರಸಪ್ಪ, ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ ಅವರು ಕಾನಹೊಸಹಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ-50ರ ಪಕ್ಕದಲ್ಲಿರುವ ಗಾಣಿಗರ ಸಮುದಾಯ ಭವನ ವೀಕ್ಷಿಸಿದರು. ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಧಿಕಾರಿಗಳು ಮತ್ತು ಸಾರ್ವಜನಿಕರ ವಾಹನಗಳಿಗೆ ಪಾಕಿರ್ಂಗ್ ಸೇರಿದಂತೆ ನಾನಾ ವ್ಯವಸ್ಥೆ ಕಲ್ಪಿಸುವ ಜಾಗ ಪರಿಶೀಲಿಸಿದರು.