

ಕಾನಹೊಸಹಳ್ಳಿ: ಕೆರೆ ಕೋಡಿ ಬಿದ್ದು ಜನರಿಗೆ ಆಗುತ್ತಿರುವ ತೊಂದರೆಯನ್ನು ಕಣ್ಣಾರೆ ಕಂಡಿದ್ದು, ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹುಲಿಕೆರೆಯಿಂದ ಚಿಕ್ಕಕುಂಬಳಗುಂಟೆ ಸಂಪರ್ಕ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಗಾಗಿ 9 ಕೋಟಿ ರೂ.ಅನುದಾನ ಒದಗಿಸಲಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಸಮೀಪದ ಹುಲಿಕೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಭಾಗದ ರಸ್ತೆ ಸೇರಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಸ್ಥಳೀಯರು ಕಾಮಗಾರಿಗಳಿಗೆ ಸಹಕರಿಸಬೇಕು. ಅಂದಾಗ ಮಾತ್ರ ಗ್ರಾಮಾಭಿವೃದ್ಧಿಗೆ ಅನುಕೂಲವಾಗಲಿದೆ ಎಂದ ಅವರು, ರಸ್ತೆ ಕಾಮಗಾರಿ ನಡೆಯುವಾಗ ಅಕ್ಕಪಕ್ಕದ ಮನೆಯವರು, ಗ್ರಾಮದ ಮುಖಂಡರು ಸಹಕಾರ ನೀಡಬೇಕು. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ನಡೆಸಿದರೆ ಸಹಿಸುವುದಿಲ್ಲ ಎಂದು ಗುತ್ತಿಗೆದಾರರಿಗೆ ಎಚ್ಚರಿಸಿದರು.
ಲೋಕೋಪಯೋಗಿ ಇಲಾಖೆ ಎಇಇ ಕೆ.ನಾಗನಗೌಡ, ಜೆಇ ಕೊಟ್ರೇಶ್ ದೊಡ್ಡಮನಿ, ಹಿರೇಕುಂಬಳಗುಂಟೆ ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷೆ ಗಂಗಮ್ಮ ಕರಿಬಸಪ್ಪ, ಸದಸ್ಯ ದುರುಗೇಶ್, ಮುಖಂಡರಾದ ಡಾ.ಟಿ.ಓಂಕಾರಪ್ಪ, ಕೆಇಬಿ ಮಾರಪ್ಪ, ಶರಣನಗೌಡ, ಎಂ.ಸಿ.ಪ್ರಸನ್ನಕುಮಾರ್, ಎನ್.ಜಿ.ರಮೇಶ್ ಗೌಡ, ಶಿಕ್ಷಕ ಕುಬೇರಪ್ಪ ಇತರರಿದ್ದರು.