

ಕಾನಹೊಸಹಳ್ಳಿ: ಕೆಮ್ಮು, ರಾತ್ರಿ ವೇಳೆ ಜ್ವರ, ಕಫದ ತೊಂದರೆಗಳು ಎರಡು ವಾರಕ್ಕಿಂತ ಹೆಚ್ಚು ಅವಧಿ ಇದ್ದರೆ ಅದು ಕ್ಷಯರೋಗದ ಲಕ್ಷಣಗಳಿರಬಹುದು. ಹಾಗಾಗಿ, ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಗಾಗಿ ಚಿಕಿತ್ಸೆ ಪಡೆಯಬೇಕೆಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಜಗದೀಶ್ ತಿಳಿಸಿದರು.
ಹುಡೇಂ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ಷಯರೋಗ ನಿರ್ಮೂಲನೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷಯರೋಗಿಗಳು ಆರು ತಿಂಗಳು ವೈದ್ಯರ ಸಲಹೆಯೊಂದಿಗೆ ಸೂಕ್ತ ಚಿಕಿತ್ಸೆ ಪಡೆದರೆ ವಾಸಿಯಾಗಲಿದೆ. ಕ್ಷಯರೋಗಿಗಳು ಕೆಮ್ಮಿದಾಗ, ಸೀನಿದಾಗ ಹೊರಬರುವ ರೋಗಾಣುವಿನಿಂದ ಆರೋಗ್ಯವಂತರಿಗೂ ಸೋಂಕು ಹರಡಲಿದೆ.
ಹಾಗಾಗಿ, ಎರಡು ವಾರಕ್ಕಿಂತ ಹೆಚ್ಚು ಅವಧಿಗೆ ಕೆಮ್ಮು, ಸೀನು, ಜ್ವರ ಇರುವಂಥವರು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಪರೀಕ್ಷೆ ಮಾಡಿಸಿ, ವೈದ್ಯರಿಂದ ಚಿಕಿತ್ಸೆ ಪಡೆಯುವ ಮೂಲಕ ಕ್ಷ ಮುಕ್ತ ಸಮಾಜಕ್ಕೆ ಪಣ ತೊಡಬೇಕಿದೆ ಎಂದರು.
ಹುಡೇಂ ಆಸ್ಪತ್ರೆ ವೈದ್ಯಾಧಿಕಾರಿ ಸಂದೀಪ್, ಜಿಲ್ಲಾ ಮಟ್ಟದ ಎಕ್ಸ್‌ರೇ ಸಂಯೋಜಕ ಕೊಟ್ರೇಶ್, ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಕಾಳಮ್ಮ, ಸುಪ್ರಿಯಾ, ಗೀತಾ, ರೇಖಾ, ತಾಲೂಕು ಆರೋಗ್ಯ ಸಂಯೋಜಕ ರಾಜು, ಆಸ್ಪತ್ರೆ ಸಿಬ್ಬಂದಿ ನಾಗೇಶ್, ನೂರ್ ಫಾತೀಮಾ, ಪವಿತ್ರಾ, ಲಕ್ಷ್ಮೀ, ಉಷಾ, ಪ್ರಯೋಗಾಲಯ ತಂತ್ರಜ್ಞ ಮಂಜುನಾಥ, ಆಶಾ ಕಾರ್ಯಕರ್ತೆಯರು ಇದ್ದರು.