

ಕಾನಹೊಸಹಳ್ಳಿ: ರೈತರಿಗೆ ಬಿತ್ತನೆ ಮಾಡಲು ಗುಣಮಟ್ಟದ ಬೀಜ ವಿತರಣೆಗೆ ಕ್ರಮ ವಹಿಸಲಾಗುವುದು. ಒಂದು ವೇಳೆ ಬೀಜ ಕಳಪೆಯಾಗಿದ್ದರೆ ಕೂಡಲೇ ರೈತರು ದೂರು ಸಲ್ಲಿಸಬಹುದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕೆ.ವಾಮದೇವ ಕೊಳ್ಳಿ ತಿಳಿಸಿದರು.
ಗುಡೇಕೋಟೆ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ರೈತರಿಗೆ ಬಿತ್ತನೆ ಬೀಜ ವಿತರಿಸಿ ಮಾತನಾಡಿದರು. ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಈವರೆಗೆ ಕಚೇರಿಯಿಂದ ವಿವಿಧ ಕಂಪನಿಯ ಮೆಕ್ಕೆಜೋಳ, ರಾಗಿ, ಸಜ್ಜೆ, ಜೋಳ, ಸೂರ್ಯಕಾಂತಿ, ತೊಗರಿ ಬಿತ್ತನೆಬೀಜ ನೀಡಲಾಗಿದ್ದು, ಎಲ್ಲವು ಚೆನ್ನಾಗಿ ಮೊಳಕೆ ಬಂದಿವೆ ಮತ್ತು ಬೀಜಗಳ ಬಗ್ಗೆ ಯಾವುದೇ ದೂರು ರೈತರಿಂದ ಬಂದಿಲ್ಲ.
ಈ ವರ್ಷ ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಉತ್ತಮ ಆರಂಭವಾಗಿದ್ದು, ಈ ಭಾಗದ ರೈತರು ಹೆಚ್ಚಾಗಿ ಶೇಂಗಾ ಬೆಳೆ ಬೆಳೆಯಲು ಬಯಸುತ್ತಾರೆ. ಅದಕ್ಕೆ ರೈತರ ಬೇಡಿಕೆಯಂತೆ ಶೇಂಗಾ ಬೀಜ ಪೂರೈಕೆಗೆ ಅಗತ್ಯ ಕ್ರಮ ವಹಿಸಲಾಗಿದೆ ಎಂದರು.