

ಕಾನಹೊಸಹಳ್ಳಿ: ಇಲ್ಲಿನ ಗ್ರಾಪಂ ಕಚೇರಿ, ಹಾಸ್ಟೆಲ್, ಅಂಗನವಾಡಿ ಕೇಂದ್ರಗಳಿಗೆ ವಿಜಯನಗರ ಜಿಪಂ ಸಿಇಒ ಬಿ.ಸದಾಶಿವ ಪ್ರಭು ಗುರುವಾರ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು.
ಗ್ರಾಪಂ ಕಚೇರಿಯಲ್ಲಿ ಸಿಬ್ಬಂದಿ ಹಾಜರಾತಿ ಪುಸ್ತಕ ವೀಕ್ಷಿಸಿ ಸಹಿ ಮಾಡದಿರುವುದು ಕಂಡು ಗರಂ ಆದರು. ಕಚೇರಿಗೆ ಸ್ವಲ್ಪ ತಡವಾಗಿ ಆಗಮಿಸಿದ ಪಿಡಿಒ ಬಸಮ್ಮ, ಎಪಿಎಂಸಿ ಜಾಗದ ಕುರಿತು ಕೋರ್ಟ್‌ನಲ್ಲಿ ವಿಚಾರಣೆ ಇರುವುದರಿಂದ ವಕೀಲರ ಬಳಿ ಚರ್ಚಿಸಿ ಬರುವುದು ಸ್ವಲ್ಪ ವಿಳಂಬವಾಯಿತು ಎಂದು ಸಮಜಾಯಿಷಿ ನೀಡಿದರು.
ಆದರೂ, ಸಿಇಒ ಸದಾಶಿವ ಪ್ರಭು ಅವರು ಶೋಕಾಸ್ ನೋಟಿಸ್ ನೀಡಿದರು. ಬರ ಹಿನ್ನೆಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು. ನೀರು ಪೋಲಾಗದಂತೆ ಕ್ರಮವಹಿಸಬೇಕೆಂದು ಗ್ರಾಪಂ ಅಧ್ಯಕ್ಷ ಎ.ಸಿ.ಚೇತನ್ ಹಾಗೂ ಪಿಡಿಒ ಬಸಮ್ಮಗೆ ತಿಳಿಸಿದರು.
ನಂತರ ಬಿಸಿಎಂ ಮೆಟ್ರಿಕ್ ಹಾಗೂ ಕುಲುಮೆಹಟ್ಟಿಯ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಿ, ಆಹಾರ ಪದಾರ್ಥ, ತರಕಾರಿ, ಸೊಪ್ಪು ಪರಿಶೀಲಿಸಿದರು. ಅಲ್ಲದೆ, ವಿದ್ಯಾರ್ಥಿಗಳಿಗೆ ತಯಾರಿಸಿದ ಸಾಂಬಾರ್ ರುಚಿ ನೋಡಿದರು.
ಶೌಚಗೃಹಗಳನ್ನು ನೋಡಿದರು. ಗ್ರಾಪಂ ಸದಸ್ಯ ಅಡವಿ ನಾಗರಾಜ, ಇಮಡಾಪುರ ನಾಗರಾಜ, ನಿಲಯ ಮೇಲ್ವಿಚಾರಕರಾದ ಸಹನಾ ಮತ್ತು ಸುಮಾ ಇತರರಿದ್ದರು.
ಕಾನಹೊಸಹಳ್ಳಿಯ ಕರೇಕಲ್ಲು ಅಂಗನವಾಡಿ ಕೇಂದ್ರಕ್ಕೆ ತೆರಳಿದ ಜಿಪಂ ಸಿಇಒ ಸದಾಶಿವ ಪ್ರಭು ಅವರು ಚಿಣ್ಣರ ಜತೆ ಸ್ವಲ್ಪ ಹೊತ್ತು ಕಾಲ ಕಳೆದರು. ತಯಾರಿಸಿದ ಊಟ ಸವಿದರು.
ಹಾಜರಾತಿ ಪುಸ್ತಕದಲ್ಲಿ ಇರುವುದಕ್ಕಿಂತ ಮಕ್ಕಳ ಸಂಖ್ಯೆ ಕಡಿಮೆ ಇರುವುದನ್ನು ಕಂಡು ಪ್ರಶ್ನಿಸಿದರು. ಪಾಲಕರು ಕರೆದೊಯ್ದರು ಎಂದು ಕಾರ್ಯಕರ್ತೆ ಗಾಯತ್ರಿ ತಿಳಿಸಿದರು. ಉತ್ತಮ ನಿರ್ವಹಣೆ ಮಾಡಿದ್ದೀರಿ ಎಂದು ಸಿಇಒ ಮೆಚ್ಚುಗೆ ಸೂಚಿಸಿದರು.
ಕಾನಹೊಸಹಳ್ಳಿ ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದಲ್ಲಿರುವ ದಲಿತ ಕೇರಿಗೆ ಭೇಟಿ ನೀಡಿದ್ದ ಜಿಪಂ ಸಿಇಒ ಸದಾಶಿವ ಪ್ರಭು ಅವರು, ಚರಂಡಿ ಅವ್ಯವಸ್ಥೆ ಕಂಡು ಶೀಘ್ರವೇ ಸ್ವಚ್ಛ ಮಾಡಿಸುವಂತೆ ಗ್ರಾಪಂ ಅಧ್ಯಕ್ಷ ಮತ್ತು ಪಿಡಿಒಗೆ ಸೂಚಿಸಿದರು.
ಮಳೆಗಾಲದಲ್ಲಿ ನೀರು ನುಗ್ಗುವುದರಿಂದ ಮನೆಯಲ್ಲಿ ವಾಸಮಾಡಲು ಸಾಧ್ಯವಾಗುತ್ತಿಲ್ಲ ಎಂದು ನಿವಾಸಿಗಳು ಗೋಳು ತೋಡಿಕೊಂಡರು.