

ಕಾನಹೊಸಹಳ್ಳಿ: ಮಕ್ಕಳಿಗೆ ಗುಣಮಟ್ಟದ ಶಿಕ್ಣಣ ನೀಡುವುದರೊಂದಿಗೆ ಸಾಂಸ್ಕೃತಿಕ ಕಲೆ ಕಲಿಸುವುದೂ ಮುಖ್ಯ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ ಹೇಳಿದರು.
ಚಿಕ್ಕಜೋಗಿಹಳ್ಳಿ ಕೇಂದ್ರೀಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಶುಕ್ರವಾರ ವಿಭಾಗೀಯ ಮಟ್ಟದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಬದುಕು ರೂಪಿಸಿದರೆ, ಸಾಂಸ್ಕೃತಿಕ ಕಲೆ ಸಂಸ್ಕಾರಯುತ ಜೀವನ ರೂಪಿಸುತ್ತದೆ ಎಂದ ಅವರು, ಐದು ದಶಕಗಳ ಹಿಂದೆ ಚಿಕ್ಕಜೋಗಿಹಳ್ಳಿ ದೇಶದ ಮೊದಲ ಮಾದರಿ ಗ್ರಾಮವೆಂಬ ಕೀರ್ತಿ ಪಡೆದುಕೊಂಡಿದೆ. ಈ ಗ್ರಾಮದ ಸಮಗ್ರ ಅಭಿವೃದ್ಧಿಗೆ ಸಹಕರಿಸುವೆ. ಕೇಂದ್ರೀಯ ವಿದ್ಯಾಲಯದ ಪ್ರಗತಿಗೆ ಶ್ರಮಿಸುವೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಕೆ.ವಿ.ರವೀಂದ್ರನಾಥ ಬಾಬು ಮಾತನಾಡಿ, ನಾನು ಶಾಸಕನಾಗಿದ್ದ ವೇಳೆ ವಿದ್ಯಾಲಯಕ್ಕಾಗಿ ಅಗತ್ಯ 32 ಎಕರೆ ಭೂಮಿ ದಾನ ನೀಡಿದೆ. ಇಲ್ಲಿ ಕಲಿತವರು ವೈದ್ಯರು, ಇಂಜಿನಿಯರ್, ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಾಗಿಸಾರ್ವಜನಿಕ ಸೇವೆ ಸಲ್ಲಿಸುತ್ತಿರುವುದು ಖುಷಿ ನೀಡುತ್ತಿದೆ ಎಂದರು. ಪ್ರಾಚಾರ್ಯ ಸುದೇಶ್ ಮಲಾಜುರೆ ಮಾತನಾಡಿದರು. ಭೂದಾನಿ ಕೆ.ವಿ.ಆರ್.ವಿಜಯಲಕ್ಷ್ಮೀ, ಮಾಕನಡಕು ಗ್ರಾಪಂ ಅಧ್ಯಕ್ಷ ಜೆ.ಎಂ.ರಾಜೇಶನಾಯ್ಕ, ಉಪ ಪ್ರಾಚಾರ್ಯ ಯು.ಎಸ್.ಬಳ್ಳಾರಿ ಇತರರಿದ್ದರು.
ಕಲೋತ್ಸವದಲ್ಲಿ ಕೊಪ್ಪಳ, ರಾಯಚೂರು, ಯಾದಗಿರಿ, ಗದಗ, ಹಾವೇರಿ, ಬಾಗಲಕೋಟೆ, ಕಲಬುರಗಿ, ಬೀದರ್, ದಾವಣಗೆರೆ, ವಿಜಯಪುರ ಸೇರಿ 16 ಜಿಲ್ಲೆಯ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಕಲಾ ಪ್ರದರ್ಶನ ನೀಡಿದರು.