

ಕಾನಹೊಸಹಳ್ಳಿ: ಅಮಲಾಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಮೆಕ್ಕೆಜೋಳ ಜಮೀನುಗಳಿಗೆ ನುಗ್ಗಿದ ಕರಡಿಗಳು ಬೆಳೆ ನಾಶಪಡಿಸಿವೆ.
ಗ್ರಾಮದ ಪರಮೇಶ್ವರಮ್ಮ ಅವರ ಎರಡು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಬೆಳೆಯು ಕಾಳುಕಟ್ಟುವ ಹಂತದಲ್ಲಿತ್ತು. ಈ ಸಂದರ್ಭದಲ್ಲಿ ಕರಡಿಗಳ ಗುಂಪು ದಾಳಿ ಮಾಡಿ ಸಂಪೂರ್ಣ ಹಾಳು ಮಾಡಿದ್ದು ಅಪಾರ ನಷ್ಟವಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಗ್ರಾಮದ ಹಲವು ರೈತರ ಜಮೀನಿಗಳಿಗೆ ಕರಡಿಗಳು ಮತ್ತು ಕಾಡು ಹಂದಿಗಳು ದಾಳಿ ಮಾಡಿ ಬೆಳೆ ನಾಶ ಪಡಿಸುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಬೆಳೆ ರಕ್ಷಣೆಗೆ ರಾತ್ರಿ ಹೊತ್ತು ಕಾವಲಿಗೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ.
ನಷ್ಟ ಪರಿಹಾರ ಹಾಗೂ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂಬುದು ರೈತರ ಒತ್ತಾಯವಾಗಿದೆ.