

ಕಾನಹೊಸಹಳ್ಳಿ: ಸಮಗ್ರ ನೀರಾವರಿ ಯೋಜನೆ ಜಾರಿಗೆ ನದಿ ಮೂಲಗಳ ಕೊರತೆಯಿಲ್ಲ. ಆದರೆ, ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಕೂಡ್ಲಿಗಿ ತಾಲೂಕಿನ ಜನತೆ ನರಕಯಾತನೆ ಅನುಭವಿಸುವಂತಾಗಿದೆ ಎಂದು ಸಾವಯವ ಕೃಷಿಕ ಹುಲಿಕೆರೆ ಎಚ್.ವಿ.ಸಜ್ಜನ್ ಬೇಸರ ವ್ಯಕ್ತಪಡಿಸಿದರು.
ಕೂಡ್ಲಿಗಿ ತಾಲೂಕಿನ ಸಮಗ್ರ ನೀರಾವರಿ ಸೌಲಭ್ಯಕ್ಕಾಗಿ ಗ್ರಾಮದ ಕೆಎಂಎಸ್ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಹೋರಾಟ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಪಶ್ಚಿಮ ಘಟ್ಟದ ನದಿಗಳನ್ನು ಉತ್ತರದ ಕಡೆ ತಿರುಗಿಸಿದರೆ ಅರ್ಧ ರಾಜ್ಯಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಅರಬ್ಬಿಸಮುದ್ರ ಸೇರುವ ನೀರನ್ನು ಬಳಸಿಕೊಳ್ಳುವ ಇಚ್ಛಾಶಕ್ತಿ ಸರ್ಕಾರಗಳಿಗೆ ಬೇಕಿದೆ. ಪ್ರತಿ ಗ್ರಾಮದಲ್ಲಿ ನೀರಾವರಿ ಹೋರಾಟ ಸಮಿತಿ ರಚಿಸಿಕೊಂಡು ಸಂಘಟನಾತ್ಮಕವಾಗಿ ಸರ್ಕಾರಗಳನ್ನು ಎಚ್ಚರಿಸಿದರೆ ಫಲ ಸಿಗಲಿದೆ ಎಂದರು.
ಹೋರಾಟಗಾರ ದೊಣ್ಣೆಹಳ್ಳಿ ಗುರುಮೂರ್ತಿ ಮಾತನಾಡಿ, ನೀರಾವರಿ ಎಂಬುದು ರೈತರ ಜೀವನ್ಮರಣದ ಪ್ರಶ್ನೆಯಾಗಿದೆ. ಗುಡೇಕೋಟೆ ಬಳಿಯ ಸರ್ವೋದಯದಲ್ಲಿ ಕಳೆದ 30 ವರ್ಷಗಳ ಹಿಂದೆ 10 ದಿನ ನೀರಾವರಿ ಹೋರಾಟದ ಕಾರ್ಯಾಗಾರ ನಡೆಸಲಾಗಿತ್ತು. ಆಗಿನಿಂದಲೂ ನಿರಂತರವಾಗಿ ಹೋರಾಟ ನಡೆಸಿದರೂ ಬರಪೀಡಿತ ತಾಲೂಕಾದ ಕೂಡ್ಲಿಗಿಗೆ ಸಮಗ್ರ ನೀರಾವರಿ ಸೌಲಭ್ಯಗಳು ಈವರೆಗೆ ಸಿಕ್ಕಿಲ್ಲ. ಶಾಸಕರು, ಸಂಸದರು, ಸಚಿವರು ಕಾಳಜಿ ತೋರದ ಹೊರತು ಯೋಜನೆ ಜಾರಿಯಾಗಲ್ಲ. ಭದ್ರಾ ಮೇಲ್ದಂಡೆ ಯೋಜನೆಯ ಸೌಲಭ್ಯ ಕೂಡ್ಲಿಗಿ ತಾಲೂಕಿಗೂ ಸಿಗಬೇಕು ಎಂದರು.
ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ.ಐಮಡಿ ಶರಣಾರ್ಯರು, ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ, ಡಾ.ಓಂಕಾರಪ್ಪ, ನಾಗರಕಟ್ಟೆ ರಾಜೇಂದ್ರ ಪ್ರಸಾದ್, ನಾಗಲಿಂಗಪ್ಪ, ರೈತ ಸಂಘದ ಪ್ರಮುಖರಾದ ಜಿ.ಪಿ.ಗುರುಲಿಂಗಪ್ಪ, ಕಕ್ಕುಪ್ಪಿ ಬಸವರಾಜ, ಪ್ರಮುಖರಾದ ಕೆ.ಸುಭಾಷ್ ಚಂದ್ರ, ಸುಲ್ತಾನ್‌ಪುರ ಕಾಸೀಂ, ಕೆಂಚಮಲ್ಲನಹಳ್ಳಿ ಬಸವರಾಜ್, ಕರವೇ ತಾಲೂಕು ಅಧ್ಯಕ್ಷ ಕಾಟೇರ ಹಾಲೇಶ್, ಗ್ರಾಪಂ ಅಧ್ಯಕ್ಷ ಕೆ.ಜಿ.ಸಿದ್ಧನಗೌಡ, ಎಚ್.ಬಿ.ಕಣ್ಣ, ಲಕ್ಷ್ಮೀದೇವಿ, ಬಣವಿಕಲ್ಲು ಎರ‌್ರಿಸ್ವಾಮಿ, ಅರವಿಂದ ಸಜ್ಜನ್, ಲಕ್ಕಜ್ಜಿ ಮಲ್ಲಿಕಾರ್ಜುನ, ತಾಯಕನಹಳ್ಳಿ ಬಿ.ಟಿ.ಮಂಜಣ್ಣ, ಸೂರ್ಯಪ್ರಕಾಶ್ ಇತರರಿದ್ದರು.
ಕೂಡ್ಲಿಗಿ ತಾಲೂಕಿಗೆ ಸಮಗ್ರ ನೀರಾವರಿ ಸೌಲಭ್ಯಕ್ಕಾಗಿ ಸರ್ಕಾರವನ್ನು ಒತ್ತಾಯಿಸಲು ಸದಾ ರೈತರೊಂದಿಗೆ ಇರುತ್ತೇನೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭರವಸೆ ನೀಡಿದರು. ಮುಂದಿನ ಬಜೆಟ್ ನಲ್ಲಿ ತಾಲೂಕಿಗೆ ಸಮಗ್ರ ನೀರಾವರಿ ಯೋಜನೆ ಜಾರಿಗಾಗಿ ಸರ್ಕಾರವನ್ನು ಒತ್ತಾಯಿಸಲಾಗುವುದು. ತಾಲೂಕು ಅಭಿವೃದ್ಧಿಯಾಗಲು ನೀರಾವರಿ ಯೋಜನೆ ಸಾಕಾರಗೊಳ್ಳಬೇಕು ಎಂದು ಅರಿತಿದ್ದೇನೆ. ನಮ್ಮ ತಂದೆ ಎನ್.ಟಿ.ಬೊಮ್ಮಣ್ಣ ಅವರು ಶಾಸಕರಾಗಿದ್ದಾಗಲೂ ನೀರಾವರಿ ಯೋಜನೆ ಜಾರಿಗೆ ಶ್ರಮಿಸಿದ್ದರು. ಈಗ ನಾನು ಸಹ ನೀರಾವರಿ ತಜ್ಞರ ಸಲಹೆ ಪಡೆಯುವ ಮೂಲಕ ರೈತರಿಗೆ ಹೆಚ್ಚಿನ ಅನುಕೂಲವಾಗುವ ಸಮಗ್ರ ನೀರಾವರಿ ಯೋಜನೆ ಜಾರಿಗಾಗಿ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.