

ಕಾನಹೊಸಹಳ್ಳಿ: ವಿದ್ಯಾರ್ಥಿಗಳು ದುಶ್ಚಟಗಳನ್ನು ಕಲಿತು ಆರೋಗ್ಯ ಹಾಳು ಮಾಡಿಕೊಳ್ಳದೆ, ನಿರಂತರವಾಗಿ ಪುಸ್ತಕ, ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡು ಜ್ಞಾನ ಸಂಪಾದಿಸಬೇಕು. ಈ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಗುಡೇಕೋಟೆ ಠಾಣೆ ಮುಖ್ಯಪೇದೆ ಸ್ವರೂಪಾನಂದ ಎಂ.ಕೊಟ್ಟೂರು ತಿಳಿಸಿದರು.
ಚಿರತಗುಂಡು ಗ್ರಾಮದ ಸರ್ಕಾರಿ ಪರಿಶಿಷ್ಟ ಪಂಗಡ ಮೆಟ್ರಿಕ್‌ಪೂರ್ವ ಬಾಲಕರ ವಸತಿ ನಿಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ನಶೆಮುಕ್ತ ಭಾರತ ಅಭಿಯಾನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ದುಶ್ಚಟಗಳಿಂದ ಆರೋಗ್ಯ ಹಾಗೂ ನೆಮ್ಮದಿ ಹಾಳಾಗಲಿದೆ.
ಪಾಲಕರ ಶ್ರಮಕ್ಕೂ ಬೆಲೆ ಇಲ್ಲದಂತಾಗಲಿದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿಕೊಳ್ಳಬೇಕು. ಕಷ್ಟ ಪಡುವ ತಂದೆ-ತಾಯಿ ಶ್ರಮವನ್ನು ಮನಗಂಡು ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕೆಂದು ತಿಳಿಸಿದರು.
ಎಎಸ್‌ಐ ಬಾಬಾ ಫಕ್ರುದ್ಧೀನ್ ಮಾತನಾಡಿ, ದೇಶಕ್ಕೆ ಯುವಶಕ್ತಿಯೇ ನಿಜವಾದ ಸಂಪತ್ತು ಆಗಿದ್ದು, ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳನ್ನು ಪ್ರತಿಯೊಬ್ಬರೂ ಅರಿತಾಗ ಸ್ವಸ್ಥ ಸಮಾಜ ನಿರ್ಮಿಸಲು ಸಾಧ್ಯವಿದೆ ಎಂದು ತಿಳಿಸಿದರು. ವಸತಿ ನಿಲಯದ ಮೇಲ್ವಿಚಾರಕ ಮಲ್ಲಪ್ಪ ನಾಗೂರು ಇತರರಿದ್ದರು.