ಕಾನೂನಿನ ಕನಿಷ್ಠ ಜ್ಞಾನವಾದರೂ ಇರಲಿ

Untitled design(9)
ಸ್ವರೂಪ್ ಕೊಟ್ಟೂರು
Published on

ಕಾನಹೊಸಹಳ್ಳಿ: ಅನ್ಯಾಯ, ಕಿರುಕುಳ, ದೌರ್ಜನ್ಯಗಳನ್ನೆಲ್ಲ ಧೈರ್ಯವಾಗಿ ಪ್ರತಿರೋಧಿಸಬೇಕು. ಕಾನೂನಿನ ಬಲ ಮತ್ತು ನೆರವಿನಿಂದ ತಪ್ಪಿತಸ್ಥರಿಗೆ ತಕ್ಕ ಪಾಠ ಕಲಿಸಬೇಕು. ಈ ಕಾರಣಕ್ಕಾಗಿ ಪ್ರತಿಯೊಬ್ಬರೂ ಕಾನೂನುಗಳು ಮತ್ತು ಅವುಗಳ ಮಹತ್ವ ಅರಿತುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಲೇಖಕ ಸ್ವರೂಪ್ ಕೊಟ್ಟೂರು ತಿಳಿಸಿದರು.

ಚಿರತಗುಂಡು ಗ್ರಾಮದ ಬಸವೇಶ್ವರ ಪ್ರೌಢಶಾಲೆಯಲ್ಲಿ ಗುಡೇಕೋಟೆ ಠಾಣೆಯಿಂದ ಆಯೋಜಿಸಿದ್ದ ಪೊಕ್ಸೋ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಸಮಾಜದಲ್ಲಿ ಇಂದಿಗೂ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳು ಘಟಿಸುತ್ತಿವೆ. ಈ ಬಗ್ಗೆ ಧೈರ್ಯವಾಗಿ ದೂರು ಕೊಡಲು ಬಹುತೇಕರು ಮುಂದೆ ಬರುತ್ತಿಲ್ಲ. ಸಾಮಾಜಿಕ ಜವಾಬ್ದಾರಿ ಇಲ್ಲದಿರುವುದು ಹಾಗೂ ಕಾನೂನಿನ ಸರಿಯಾದ ಜ್ಞಾನದ ಕೊರತೆಯೇ ಇದಕ್ಕೆಲ್ಲ ಕಾರಣ ಎಂದರು.

ಮಹಿಳೆ ಮತ್ತು ಮಕ್ಕಳ ಕಾನೂನುಗಳ ಬಗ್ಗೆ ಕನಿಷ್ಠ ಜ್ಞಾನ ಹೊಂದಬೇಕು. ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಸಂವಿಧಾನದಲ್ಲಿ ಹೆಚ್ಚು ಒತ್ತು ಕೊಡಲಾಗಿದ್ದು, ಅವುಗಳ ಜ್ಞಾನ ಹೊಂದಿದಾಗ ಆ ಕಾನೂನುಗಳನ್ನೆಲ್ಲ ಸಕಾಲದಲ್ಲಿ ಸದ್ಭಳಕೆ ಮಾಡಿಕೊಂಡು ನ್ಯಾಯ ಪಡೆಯಬಹುದು ಎಂದರು ತಿಳಿಸಿದರು.

ಮಹಿಳೆಯರು ಮತ್ತು ಮಕ್ಕಳು ಆತಂಕ, ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಎಂತಹದ್ದೇ ಸಂದರ್ಭದಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸಂವಿಧಾನವು ನೀಡಿರುವ ಹಕ್ಕುಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಅದಕ್ಕೆ ನಿಮ್ಮೆಲ್ಲರ ಸಹಕಾರ ತುಂಬಾ ಮುಖ್ಯವೆಂದು ಸ್ವರೂಪ್ ಕೊಟ್ಟೂರು ತಿಳಿಸಿದರು.

ಗುಡೇಕೋಟೆ ಎಎಸ್‌ಐ ಬಾಬಾ ಫಕ್ರುದ್ದೀನ್ ಮಾತನಾಡಿ, ಬಾಲ್ಯ ವಿವಾಹ ಸಾಮಾಜಿಕ ಪಿಡುಗಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಬಾಲ್ಯ ವಿವಾಹದ ಮತ್ತು ದುರ್ನಡತೆ ತೋರುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಬೇಕು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೆ ಧೈರ್ಯವಾಗಿ ಬಂದು ದೂರು ನೀಡಿದರೆ ಕಾನೂನು ಕ್ರಮ ವಹಿಸಲಾಗುವುದು. ಮಕ್ಕಳ ರಕ್ಷಣೆ ನಮ್ಮ ಧ್ಯೇಯ ಎಂದರು. ಮುಖ್ಯಶಿಕ್ಷಕ ಬೊಮ್ಮಣ್ಣ, ಶಿಕ್ಷಕರಾದ ವೀರನಗೌಡ್ರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net