

ಕಾನಹೊಸಹಳ್ಳಿ: ರೈತರು ಬೆಳೆದ ಫಸಲನ್ನು ಮೌಲ್ಯವರ್ಧನೆ ಮಾಡಿದರೆ ಉತ್ತಮ ಬೆಲೆ ಪಡೆಯಲು ಸಾಧ್ಯ ಎಂದು ಕೊಪ್ಪಳ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಘವೇಂದ್ರ ಯಲಿಗಾರ ಹೇಳಿದರು.
ಹುರುಳಿಹಾಳು ಗ್ರಾಮದಲ್ಲಿ ಮಂಗಳವಾರ ಸಮನ್ವಯ ಟ್ರಸ್ಟ್ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ‘ಸುಸ್ಥಿರ ಬೆಳವಣಿಗೆ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಒಂದು ಹೊಸ ಆಯಾಮ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ರೈತರು ಕೇವಲ ಪಾರಂಪರಿಕ ಕೃಷಿ ಪದ್ಧತಿ ಅನುಸರಿಸುವ ಕಾರಣ ಆರ್ಥಿಕ ಪ್ರಗತಿ ಕಷ್ಟ. ಅದರೊಂದಿಗೆ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆದು ಉತ್ತಮ ಬೆಲೆ ಪಡೆಯಬಹುದು ಎಂದರು.
ಬೆಂಗಳೂರು ಐಎಟಿ ಕಾರ್ಯದರ್ಶಿ ಡಾ.ವೀರಣ್ಣ ಕೆ. ಮಾತನಾಡಿ, ರೈತರು ಕೃಷಿ ತಜ್ಞರಿಂದ ಮಣ್ಣಿನ ಫಲವತ್ತತೆ ಪರೀಕ್ಷೆ ಮಾಡಿಸಿ ಬಿತ್ತನೆ ಮಾಡಬೇಕು. ಬೆಳ ಕಟಾವು ನಂತರ ಸಂರಕ್ಷಣೆ, ಸಂಸ್ಕರಣೆ, ವಿಂಗಡನೆ ಕ್ರಮ ಅನುಸರಿಸುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯಬಹುದು ಎಂದರು.
ದೆಹಲಿ ಎನ್‌ಸಿಸಿಎಫ್ ಪ್ರಾದೇಶಿಕ ವ್ಯವಸ್ಥಾಪಕ ರವಿಚಂದ್ರ, ವಿಜಯನಗರ ಜಿಲ್ಲೆ ಕೃಷಿ ಇಲಾಖೆ ಉಪ ನಿರ್ದೇಶಕ ನಯೀಂ ಪಾಷಾ, ತೋಟಗಾರಿಕಾ ಉಪನಿರ್ದೇಶಕ ಚಿದಾನಂದ, ಕೌಶಲ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಹಟ್ಟಪ್ಪ ಮಾತನಾಡಿದರು. ಪ್ರಗತಿಪರ ಕೃಷಿಕರಾದ ಎಚ್.ರೇವಣ್ಣ, ಸಾವಜ್ಜಿ ರಾಜೇಂದ್ರ ಪ್ರಸಾದ್, ಜುಟ್ಟಲಿಂಗನಹಟ್ಟಿ ಬೊಮ್ಮಲಿಂಗಪ್ಪ, ರಾಮಸ್ವಾಮಿ ನಾಯ್ಕ, ಭೋಜಾನಾಯ್ಕ, ಎ.ಸಿ.ಚನ್ನಬಸಪ್ಪ, ಷಣ್ಮುಖಪ್ಪ, ಸಂಗಣ್ಣ, ಹೊಸಮನೆ ಅರುಣಕುಮಾರ್ ಇತರರಿದ್ದರು.