ಸರ್ಕಾರಿ ಶಾಲೆ ಸಬಲೀಕರಣಕ್ಕೆ ಬೆಂಬಲಿಸೋಣ

14.ಪಿ ವೈ ಪಿ 01
 ಪಿರಿಯಾಪಟ್ಟಣ ತಾಲೂಕು ಕಣಗಾಲ್ ಗ್ರಾಮದಲ್ಲಿ ಶನಿವಾರ ರವಿ ಸಂತು ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಲೆಗೆ ವಿವಿಧ ಪರಿಕರಗಳನ್ನು ವಿತರಿಸಲಾಯಿತು. ಬಳಗ ಮುಖ್ಯಸ್ಥ ಮತ್ತು ದಾನಿ ಡಾ.ವಿಜಯ್ ದುಬೈ, ಖ್ಯಾತ ಕಲಾವಿದ ರವಿಸಂತು, ಮುಖ್ಯ ಶಿಕ್ಷಕ ಯದುಕುಮಾರ್, ಶಿಕ್ಷಕರಾದ ರೋಹಿನಾ ಬಾನು, ದಿವ್ಯಾ, ಪೂಜಾ ಇತರರು ಇದ್ದರು.
Published on

ರವಿ ಸಂತು ಬಳಗ ಮುಖ್ಯಸ್ಥ ಡಾ.ವಿಜಯ್ ದುಬೈ ಅಭಿಮತ -   ಕಣಗಾಲು ಶಾಲೆಗೆ ಪರಿಕರ ವಿತರಣೆ

ಪಿರಿಯಾಪಟ್ಟಣ : ಹತ್ತಾರು ಸಮಸ್ಯೆಗಳಿಂದ ಬಳಲುತ್ತಿರುವ ಪ್ರಾಥಮಿಕ ಶಾಲೆಗಳ ಸಬಲೀಕರಣವಾದರೆ ಮಾತ್ರ ಸರ್ಕಾರ ನೀಡುತ್ತಿರುವ ಶಿಕ್ಷಣದ ಉದ್ದೇಶ ಸಾರ್ಥಕವಾಗಲಿದೆ ಎಂದು ರವಿ ಸಂತು ಬಳಗ ಮುಖ್ಯಸ್ಥ ಮತ್ತು ಹಿರಿಯ ದಾನಿ ಡಾ.ವಿಜಯ್ ದುಬೈ ಹೇಳಿದರು.

ಖ್ಯಾತ ಸಿನಿಮಾ ನಿರ್ದೇಶಕ ದಿ.ಪುಟ್ಟಣ್ಣ ಕಣಗಾಲ್ ಹುಟ್ಟೂರು ಕಣಗಾಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ

ರವಿ ಸಂತು ಬಳಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಅಗತ್ಯ ಪರಿಕರ ವಿತರಣೆ ಮತ್ತು ಶಿಕ್ಷಕರಿಗೆ ಗೌರವಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳು ಪ್ರತಿಭಾವಂತರೇ ಇರುತ್ತಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ವಿದ್ಯಾರ್ಜನೆಗೆ ಸ್ಫೂರ್ತಿ ನೀಡಬೇಕಾದ ಅಗತ್ಯವಿದೆ. ಆಧುನಿಕ ಕಾಲಘಟ್ಟದಲ್ಲಿ ಮಕ್ಕಳಿಗೆ ತಾಂತ್ರಿಕ ಸಾಧನಗಳೂ ಮುಖ್ಯವಾಗಿವೆ. ಅದನ್ನು ಸಂಘ, ಸಂಸ್ಥೆಗಳು ದಾನವಾಗಿ ನೀಡಲು ಮುಂದಾದರೆ ಭವಿಷ್ಯದ ಜವಾಬ್ದಾರಿಯುತ ಪ್ರಜೆಗಳನ್ನು ತರಬೇತುಗೊಳಿಸಲು ಸಾಧ್ಯ ಎಂದರು. ಕನ್ನಡ ಸಂಸ್ಕೃತಿಯೇ ಉಳಿದಂತೆ: ಖ್ಯಾತ ಕಲಾವಿದ ಮತ್ತು ಕಾರ್ಯಕ್ರಮದ ಆಯೋಜಕ ರವಿ ಸಂತು ಮಾತನಾಡಿ, ಕನ್ನಡ ಶಾಲೆಗಳು ಉಳಿದರೆ ಕನ್ನಡ ಸಂಸ್ಕೃತಿಯೇ ಉಳಿದಂತೆ ಎಂದರು. ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವುದರಿಂದ ಕನ್ನಡ ಭಾಷೆ, ಸಿನಿಮಾ, ಪತ್ರಿಕಾರಂಗ ಮುಂದಿನ ಹತ್ತಾರು ವರ್ಷದ ವರೆಗೆ ಸುಭದ್ರವಾಗುತ್ತವೆ. ಕನ್ನಡತನ ಉಳಿಸಲು ಸರ್ಕಾರಿ ಶಾಲೆ ಮಕ್ಕಳೇ ರಾಯಭಾರಿಗಳು ಎಂದು ಹೇಳಿದರು.

ಮಹತ್ವದ ಕಾರ್ಯ: ಮುಖ್ಯ ಶಿಕ್ಷಕ ಯದುಕುಮಾರ್, ದಾನದಿಂದ ಸಾರ್ಥಕತೆ ಸಾಧ್ಯ. ವಿದ್ಯಾಕ್ಷೇತ್ರಕ್ಕೆ ಬೆಂಬಲ ನೀಡಿ ಸರ್ಕಾರಿ ಶಾಲೆ ಮಕ್ಕಳ ವಿದ್ಯಾರ್ಜನೆಗೆ ಬೆಂಬಲಿಸುವುದು ಮಹತ್ವದ ಕಾರ್ಯ. ಈ ನಿಟ್ಟಿನಲ್ಲಿ ರವಿಸಂತು ಬಳಗ ಶ್ರೇಷ್ಠ ಸೇವೆ ಮಾಡುತ್ತಿದೆ ಎಂದು ಶ್ಲಾಘಿಸಿದರು.

‘ಸೇವಾರತ್ನ’ ಪ್ರಶಸ್ತಿ : ಇದೇ ಸಂದರ್ಭ ಶಾಲೆಗೆ ರಾಜಾ ರಘೋತ್ತಮ ಅವರ ಕುಟುಂಬದ ಹೆಸರಿನಲ್ಲಿ ಲ್ಯಾಪ್ ಟಾಪ್, ಜಲ ಶುದ್ಧೀಕರಣ ಯಂತ್ರ, ಕ್ರೀಡಾಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ದಾನವಾಗಿ ನೀಡಲಾಯಿತು. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕ ಯದುಕುಮಾರ್, ರೋಹಿನಾ ಬಾನು, ದಿವ್ಯಾ, ಪೂಜಾ ಅವರಿಗೆ ರವಿ ಸಂತು ಬಳಗದ ‘ಸೇವಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರವಿ ಸಂತು ಬಳಗ ಸದಸ್ಯರಾದ ಸುರೇಶ್ ಗೌಡ, ರವಿ ಹಂಸಲೇಖ, ಕಿರಣ್ ಕಿಕ್ಕಿ, ಎಚ್.ಸಂತೋಷ್, ಶ್ರೀಕಂಠ, ಲೋಕೇಶ್, ಚಂದ್ರು, ಶ್ವೇತಾ, ಸುಮಿತ್ರಾ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net