

ಮುಳಬಾಗಿಲು: ವಿಶ್ವದಲ್ಲಿರುವ 4500 ಭಾಷೆಗಳಲ್ಲಿ ಕನ್ನಡ ತನ್ನದೇ ಆದ ಶ್ರೀಮಂತಿಕೆ ಹೊಂದಿದೆ. ಇಂತಹ ಭಾಷೆ ಮತ್ತು ಸಾಹಿತ್ಯ ಗಡಿಭಾಗದ ಗ್ರಾಮಗಳಲ್ಲಿ ಆಡು ಭಾಷೆಯಾಗಿ ವಿಜೃಂಭಿಸಲು ಶ್ರಮಿಸಬೇಕು ಎಂದು ಸಮ್ಮೇಳನಾಧ್ಯಕ್ಷ ಡಿ.ಚೇತನ್‌ಪ್ರಸಾದ್ ಹೇಳಿದರು.
ಆವನಿ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಆವರಣದಲ್ಲಿ ಕಸಾಪದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಶ್ರೀಮಂತಿಕೆ ಪಡೆದುಕೊಳ್ಳುವಲ್ಲಿ ಸಾಕಷ್ಟು ಮಂದಿ ಶ್ರಮಿಸಿದ್ದಾರೆ. ಅವರೆಲ್ಲರನ್ನು ನೆನಪಿಸಿಕೊಳ್ಳುವುದರೊಂದಿಗೆ ಭಾಷೆ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು ಎಂದರು.
ಪಂಪ, ರನ್ನ, ಪೊನ್ನ, ಜನ್ನ ಮೊದಲಾದವರು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ್ದಾರೆ. ರನ್ನನ ಕಾವ್ಯವನ್ನು ಪರೀಕ್ಷೆ ಮಾಡಬೇಕಾದರೆ ಅಂತಹ ವ್ಯಕ್ತಿಗೆ 8 ಎದೆಯಷ್ಟು ಎದೆಗಾರಿಕೆ ಇರಬೇಕು ಎಂದು ಕೆಲ ಸಾಹಿತಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದರು.
ಗ್ರಾಮವಿಕಾಸ ಸಂಸ್ಥೆ ನಿರ್ದೇಶಕ ಎಂ.ವಿ.ಎನ್.ರಾವ್ ಮಾತನಾಡಿ, ಗ್ರಾಮೀಣ ಸಂಸ್ಕೃತಿ ಅಧ್ಯಯನ ಕೇಂದ್ರ ಸ್ಥಾಪಿಸುವ ಮೂಲಕ ಕನ್ನಡ ಭಾಷೆ, ಸಾಹಿತ್ಯ, ನಾಡು-ನುಡಿಯನ್ನು ಜನಸ್ನೇಹಿಯಾಗಿ ಮಾಡಬೇಕು. ಆವನಿ ಹೋಬಳಿ ವ್ಯಾಪ್ತಿಯಲ್ಲಿ 80 ಗ್ರಾಮಗಳಿದ್ದು, ಕನ್ನಡ ಭಾಷಾಭಿಮಾನ ಬೆಳೆಸಲು ಅಧ್ಯಯನ ಕೇಂದ್ರಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಬಿಇಒ ಡಿ.ಗಿರಿಜೇಶ್ವರಿ ದೇವಿ ಮಾತನಾಡಿ, ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ ಪ್ರಥಮ ಸ್ಥಾನಕ್ಕೆ ಬರುವಲ್ಲಿ ಅಗತ್ಯ ಪೂರ್ವ ಸಿದ್ಧತೆ ನಡೆಸಲಾಗಿದೆ. 6 ಪಠ್ಯ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಪೂರ್ವ ಪರೀಕ್ಷೆ ನಡೆಸಲಾಗಿದೆ ಎಂದರು.
ಸಮ್ಮೇಳನಾಧ್ಯಕ್ಷರನ್ನು ಭುವನೇಶ್ವರಿ ಪಲ್ಲಕ್ಕಿಯಲ್ಲಿ ರಾಮಲಿಂಗೇಶ್ವರ ದೇವಾಲಯದವರೆಗೆ ಮೆರವಣಿಗೆ ನಡೆಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮವಿಕಾಸ ನಿರ್ದೇಶಕ ಎಂ.ಎನ್.ರಾವ್ ಮತ್ತು ದೇವರಾಯಸಮುದ್ರ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಈರಣ್ಣ ದಂಡಿನ್ ಮತ್ತಿತರರನ್ನು ಸನ್ಮಾನಿಸಲಾಯಿತು.
ತಹಸೀಲ್ದಾರ್ ಕೆ.ಎನ್.ರಾಜಶೇಖರ್, ಜಿಪಂ ಸದಸ್ಯ ಆರ್.ಕೃಷ್ಣಪ್ಪ, ತಾಪಂ ಸದಸ್ಯ ರವಿಶಂಕರ್, ಮಾಜಿ ಅಧ್ಯಕ್ಷ ಎಂ.ಎಸ್.ಶ್ರೀವಾಸರೆಡ್ಡಿ, ಆವನಿ ಹೋಬಳಿ ಸಾಹಿತ್ಯ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷ ಕೃಷ್ಣಾಚಾರಿ ಮಾತನಾಡಿದರು.
ದೇವರಾಸಮುದ್ರ ಗ್ರಾಪಂ ಮಾಜಿ ಅಧ್ಯಕ್ಷ ಕೀಲುಹೊಳಲಿ ಚಂಗಲರಾಯಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮರಕಲಘಟ್ಟ ಶಂಕರನಾರಾಯಣಗೌಡ, ಪರಶುರಾಮಸೇನೆ ಅಧ್ಯಕ್ಷ ಕೀಲುಹೊಳಲಿ ಸತೀಶ್, ಕಸಾಪ ತಾಲೂಕು ಅಧ್ಯಕ್ಷ ಜಯರಾಮರೆಡ್ಡಿ, ಗೌರವಾಧ್ಯಕ್ಷ ಕೆಂಬೋಡಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ವಿ.ಜಯಪ್ಪ, ಕೋಶಾಧ್ಯಕ್ಷ ಬಲ್ಲ ಹನುಮಂತಪ್ಪ ಮತ್ತಿತರರು ಇದ್ದರು.
ನಮ್ಮ ತಂದೆ-ತಾಯಿ ನೆನಪಿನಲ್ಲಿ ಕಸಾಪ ಖಾತೆಯಲ್ಲಿ ವೈಯಕ್ತಿಕವಾಗಿ 1 ಲಕ್ಷ ರೂ. ದತ್ತಿ ಇರಿಸಲಾಗಿದ್ದು, ಈ ಹಣದಲ್ಲಿ ಕನ್ನಡ ನಾಡು-ನುಡಿ, ಭಾಷೆಗಾಗಿ ಶ್ರಮಿಸುವ ತಲಾ ಒಬ್ಬರಿಗೆ ಪ್ರತಿ ವರ್ಷ ಕನ್ನಡಾನಂದ ಬಿರುದು ನೀಡಿ ಅಭಿನಂದಿಸಲಾಗುವುದು. ದಾವಣಗೆರೆಯಲ್ಲಿ ಶರಣರೊಬ್ಬರು ಕೋಲಾರ ಕಸಾಪಗೆ 1 ಲಕ್ಷ ರೂ. ನೀಡಿದ್ದು, ಈ ಹಣವನ್ನು ಜಿಲ್ಲೆಯಾದ್ಯಂತ ವಚನಗಳನ್ನು ಪ್ರಚಾರ ಮಾಡಲು ಬಳಕೆ ಮಾಡಿಕೊಳ್ಳಲಾಗುವುದು.
ನಾಗಾನಂದ ಕೆಂಪರಾಜ್, ಕಸಾಪ ಜಿಲ್ಲಾಧ್ಯಕ್ಷ