ಮನೆಯ ಯಜಮಾನಿಯರ ಜೀವನಕ್ಕೆ ಗೃಹಲಕ್ಷ್ಮೀ ಯೋಜನೆ ವರದಾನ, ಶಾಸಕ ಜೆ.ಎನ್.ಗಣೇಶ್ ಹೇಳಿಕೆ

GRUHALSHMI
ಕಂಪ್ಲಿಯಲ್ಲಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಕಾರ್ಯಕ್ರಮದಲ್ಲಿ ಲಂಬಾಣಿ ನೃತ್ಯದಲ್ಲಿ ತಹಸೀಲ್ದಾರ್ ಗೌಸಿಯಾಬೇಗಂ ಪಾಲ್ಗೊಂಡು ಗಮನಸೆಳೆದರು. ಪುರಸಭೆ ಸಿಒ ಕೆ.ದುರುಗಣ್ಣ ಹಾಗೂ ಲಂಬಾಣಿ ಮಹಿಳೆಯರು ಇದ್ದರು.
Published on

ಕಂಪ್ಲಿ: ಗೃಹಲಕ್ಷ್ಮೀ ಯೋಜನೆಯು ಹಿರಿಯರ ಜೀವನಕ್ಕೆ ವರದಾನವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ಇಲ್ಲಿನ ಮಾರುತಿ ನಗರದ ಸಮುದಾಯ ಭವನದಲ್ಲಿ ಬುಧವಾರ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರದಲ್ಲಿ 57ಸಾವಿರ ಮಹಿಳೆಯರು ಯೋಜನೆಗೆ ನೋಂದಾಯಿಸಿಕೊಂಡಿದ್ದು, ಕಂಪ್ಲಿಗಿಂತ ಕುರುಗೋಡು ಭಾಗದಲ್ಲಿ ಹೆಚ್ಚು ನೋಂದಣಿಯಾಗಿವೆ.

ಇನ್ನೂ ಹೆಸರು ನೋಂದಾಯಿಸದವರು ನೋಂದಣಿಗೆ ಮುಂದಾಗಬೇಕು. ಕಾಂಗ್ರೆಸಿನ ಎಲ್ಲ ಗ್ಯಾರಂಟಿ ಯೋಜನೆಗಳು ಜನಹಿತ ಹೊಂದಿವೆ ಎಂದರು.
ಪುರಸಭೆ ಸಿಒ ಕೆ.ದುರುಗಣ್ಣ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಅರಿತು ಸದ್ಬಳಕೆ ಮಾಡಿಕೊಳ್ಳುವಲ್ಲಿ ಜಾಗೃತಿ ತೋರಬೇಕು. ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಕಾರ್ಯಕ್ರಮ ವೀಕ್ಷಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿದೆ ಎಂದರು.

ಶಾಸಕರು ಕುರುಗೋಡಿನಲ್ಲೂ ಕಾರ್ಯಕ್ರಮ ಉದ್ಘಾಟಿಸಬೇಕಿದ್ದರಿಂದ ತುರ್ತಾಗಿ ಯೋಜನೆಗೆ ಚಾಲನೆ ನೀಡಿ ತೆರಳಿದರು. ಮಹಿಳೆಯರ ಗಮನಸೆಳೆಯಲು ಲಂಬಾಣಿ ನೃತ್ಯದಲ್ಲಿ ತಹಸೀಲ್ದಾರ್ ಗೌಸಿಯಾಬೇಗಂ, ಪುರಸಭೆ ಮಹಿಳಾ ಸಿಬ್ಬಂದಿ ನೃತ್ಯದಲ್ಲಿ ಪಾಲ್ಗೊಂಡು ನಾನಾ ಕಸರತ್ತು ಮಾಡಬೇಕಾಯಿತು.

ಇಷ್ಟಾದರೂ ನೂರಾರು ಮಹಿಳೆಯರನ್ನು ಸೇರಿಸಲು ಸಂಘಟಕರು ಇನ್ನಿಲ್ಲದ ತಂತ್ರ ಅನುಸರಿಸಬೇಕಾಯಿತು. ತಾಪಂ ಇಒ ಕೆ.ಆರ್.ಶ್ರೀಕುಮಾರ್, ನರೇಗಾ ಎಡಿ ಕೆ.ಎಸ್.ಮಲ್ಲನಗೌಡ, ಪುರಸಭೆ ಸದಸ್ಯರಾದ ಕೆ.ಎಸ್.ಚಾಂದ್‌ಬಾಷಾ, ವೀರಾಂಜನೇಯಲು, ಗುಡುದಮ್ಮ, ಎಂ.ಉಸ್ಮಾನ್, ಎಸಿಡಿಪಿಒ ಮೋಹನ್ ಕಾಳಾಪುರ್, ಮೇಲ್ವಿಚಾರಕಿ ಲತೀಫಾಬೇಗಮ್, ಲೆಕ್ಕಿಗ ರಮೇಶ್ ಬೆಳಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net