

ಕಂಪ್ಲಿ : ಐವತ್ತೆಂಟು ವರ್ಷದ ವರನೊಂದಿಗೆ ನಡೆಯುತ್ತಿದ್ದ 16 ವರ್ಷದ ಬಾಲೆಯ ವಿವಾಹಕ್ಕೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.
ತಾಲೂಕಿನ ಗ್ರಾಮವೊಂದರಲ್ಲಿ ಶನಿವಾರ ನಸುಕಿನ ಜಾವ ಮದುವೆ ನಿಗದಿಯಾಗಿತ್ತು. ವಿಷಯ ತಿಳಿದ ತಹಸೀಲ್ದಾರ್ ಗೌಸಿಯಾಬೇಗಂ ಮತ್ತು ತಂಡ ಕಾರ್ಯಪ್ರವೃತ್ತರಾದರು. ಆರಂಭದಲ್ಲಿ ವಧುವಿನ ಪಾಲಕರು ಮದುವೆ ತಯಾರಿ ನಡೆದಿದ್ದನ್ನು ಒಪ್ಪಲಿಲ್ಲ. ತೀವ್ರ ವಿಚಾರಣೆ ನಡೆಸಿದಾಗ ಮಧ್ಯಸ್ಥಿಕೆ ವಹಿಸಿದ್ದ ಮಹಿಳೆಯ ಹೆಸರು ಹೊರಬಿತ್ತು. ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ನಿಜಾಂಶ ಗೊತ್ತಾಗಿದೆ.
ವಧುವಿನ ಊರಲ್ಲಿ ಮದುವೆಯಾದರೆ ಗ್ರಾಮಸ್ಥರಿಗೆ ಗೊತ್ತಾಗುತ್ತೆ ಎಂದು ಬೇರೆಡೆ, ರಾತ್ರೋರಾತ್ರಿ ಮದುವೆ ಆಗಬೇಕೆನ್ನುವುದು ವರನ ಯೋಜನೆಯಾಗಿತ್ತು. ಕೊನೆಗೆ ಸಿನಿಮೀಯ ರೀತಿಯಲ್ಲಿ ವರ ಸಿಕ್ಕಿಬಿದ್ದಿದ್ದಾನೆ. ಈತನಿಗೆ ಈಗಾಗಲೆ ಎರಡು ಮದುವೆಯಾಗಿದ್ದು, ಗಂಡು ಮಗುವಿಗಾಗಿ ಈಕೆಯನ್ನು ಮದುವೆಯಾಗಲು ಬಯಸಿದ್ದ. ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ಕಾರ್ಯಾಚರಣೆಯಲ್ಲಿ ಗೌಸಿಯಾಬೇಗಂ ಸೇರಿದಂತೆ ಆರ್‌ಐ ಎ.ಗಣೇಶ್, ಗ್ರಾ.ಲೆ. ಮಂಜುನಾಥ, ಜಿಲಾನ್, ಪೊಲೀಸ್ ಪೇದೆ ಕೊಟ್ರೇಶ್, ಮಕ್ಕಳ ಸಹಾಯವಾಣಿ ತಾಲೂಕು ಸಂಯೋಜಕಿ ನೇತ್ರಾ ಪಾಲ್ಗೊಂಡಿದ್ದರು.