ರಂಗಭೂಮಿ ಕಲೆ ಸಮಾಜದ ಪ್ರತಿಬಿಂಬ; ಪ್ರಾಚಾರ್ಯ ಇಂದ್ರಿಪಿ ಮಲ್ಲಿಕಾರ್ಜುನ ಅಭಿಮತ

08022022 Kampli Youva ranga camp
Published on

ಯುವರಂಗ ತರಬೇತಿ ಶಿಬಿರಕ್ಕೆ ಚಾಲನೆ

ಕಂಪ್ಲಿ: ರಂಗಭೂಮಿ ಕಲೆ ಸಮಾಜದ ಪ್ರತಿಬಿಂಬವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಇಂದ್ರಿಪಿ ಮಲ್ಲಿಕಾರ್ಜುನ ಹೇಳಿದರು.

ಕಲ್ಬುರ್ಗಿಯ ರಂಗಾಯಣದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಕಾಲೇಜು ಯುವರಂಗ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿನಿಮಾ, ಮೊಬೈಲ್, ವ್ಯಾಟ್ಸ್‌ಆ್ಯಪ್ ಸಾಮಾಜಿಕ ಜಾಲತಾಣಗಳ ಸೋಂಕಿನಿಂದಾಗಿ ರಂಗಭೂಮಿ ಕಲೆ ಅಳಿವಿನಂಚಿಗೆ ಬಂದಿದೆ. ರಂಗಭೂಮಿ ಕಲೆಯನ್ನು ಯುವಜನತೆಯಲ್ಲಿ ಪ್ರೇರೇಪಿಸುವ ಅಗತ್ಯವಿದೆ ಎಂದರು.

ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿವಿಯ ನಾಟಕ ವಿಭಾಗದ ಉಪನ್ಯಾಸಕ ಹಾಗೂ ರಂಗಾಯಣದ ಜಿಲ್ಲಾ ಸಂಚಾಲಕ ಡಾ.ಅಣ್ಣಾಜಿ ಕೃಷ್ಣರೆಡ್ಡಿ ಮಾತನಾಡಿ, ಜಿಲ್ಲಾಮಟ್ಟದ ಮೂರುದಿನಗಳ ನಾಟಕೋತ್ಸವಕ್ಕಾಗಿ ತಾಲೂಕಿನ ಕಂಪ್ಲಿ, ಕುರುಗೋಡು ಮತ್ತು ಸಿರಗುಪ್ಪಗಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ 20 ದಿನಗಳ ರಂಗಕಲೆ ತರಬೇತಿ ನೀಡಲಾಗುವುದು. ಮಾರ್ಚ್‌ನಲ್ಲಿ ಜಿಲ್ಲಾಮಟ್ಟದ ನಾಟಕೋತ್ಸವ ಜರುಗಿಸಿ ಅತ್ಯುತ್ತಮ ತಂಡವನ್ನು ಕಲ್ಬುರ್ಗಿ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು ಎಂದರು.

ಐಕ್ಯೂಎಸಿ ಘಟಕ ಸಂಚಾಲಕ ಡಾ.ಜೆ.ಕೃಷ್ಣ ಶಿಬಿರ ಉದ್ಘಾಟಿಸಿದರು. ನಾಟಕ ನಿರ್ದೇಶಕ ಕೆ.ಶಂಕರ್ ಮೆಟ್ರಿ, ಗ್ರಂಥಪಾಲಕ ಕೆ.ಗುರುಮೂರ್ತಿ, ಉಪನ್ಯಾಸಕರಾದ ಎಂ.ಎನ್.ಪ್ರವೀಣ್‌ಕುಮಾರ್, ರಾಜ್ಮಾ ಟಿ.ಎಂ.ಆರ್., ವೀರೇಶ್, ಡಾ.ಅನ್ನಪೂರ್ಣ ಗುಡದೂರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net