

ಕಂಪ್ಲಿ: ರೇಬಿಸ್ ಮಾರಣಾಂತಿಕ ರೋಗವಾಗಿದೆ. ನಿರ್ಲಕ್ಷೃ ಮಾಡಕೂಡದು. ನಾಯಿ, ಬೆಕ್ಕುಗಳಿಗೆ ರೇಬಿಸ್ ಲಸಿಕೆ ಹಾಕಿಸಬೇಕು ಎಂದು ಪಶು ಆಸ್ಪತ್ರೆಯ ಎಡಿ ಡಾ.ಕೆ.ಯು.ಬಸವರಾಜ ಹೇಳಿದರು.
ಇಲ್ಲಿನ ಪಶು ಆಸ್ಪತ್ರೆಯ ಆವರಣದಲ್ಲಿ ವಿಶ್ವ ರೇಬಿಸ್ ದಿನಾಚರಣೆ ನಿಮಿತ್ತ ರೇಬಿಸ್ ರೋಗ ನಿಯಂತ್ರಣಕ್ಕೆ ನಾಯಿ, ಬೆಕ್ಕುಗಳಿಗೆ ಉಚಿತ ಲಸಿಕೆ ಶಿಬಿರಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ರೇಬಿಸ್ ರೋಗಕ್ಕೆ ಲಿಸ್ಸಾ ವೈರಾಣು ಕಾರಣವಾಗಿದೆ. ಸಾಮಾನ್ಯವಾಗಿ ರೇಬಿಸ್(ಹುಚ್ಚು ನಾಯಿ)ಪೀಡಿತ ನಾಯಿ ಕಡಿತದಿಂದ ರೇಬಿಸ್ ಹರಡುವ ಸಾಧ್ಯತೆ ಹೆಚ್ಚು. ಯಾವುದೇ ಪ್ರಾಣಿ ಸೇರಿ ರೇಬಿಸ್ ವೈರಾಣುವುಳ್ಳ ನಾಯಿ ಮನುಷ್ಯನಿಗೆ ಕಚ್ಚಿದಾಗ, ಗಾಯವನ್ನು ಸೋಪು, ಡಿಟರ್ಜೆಂಟ್‌ನಿಂದ ನಿರಂತರ ಹದಿನೈದು ನಿಮಿಷಗಳ ಕಾಲ ನೀರಿನಿಂದ ತೊಳೆದಲ್ಲಿ ಶೇ.98 ವೈರಾಣು ನಾಶವಾಗುತ್ತವೆ. ನಾಯಿ, ಬೆಕ್ಕುಗಳಿಗೆ ರೇಬಿಸ್ ಲಸಿಕೆ ಕೊಡಿಸಿದಲ್ಲಿ ರೇಬಿಸ್ ರೋಗದಿಂದ ನಿಯಂತ್ರಿಸಲು ಸಾಧ್ಯವಿದೆ ಎಂದರು.
ಕೇಂದ್ರದಲ್ಲಿ 3850 ಡೋಸ್ ರೇಬಿಸ್ ಲಸಿಕೆ ಸಂಗ್ರಹವಿದ್ದು, ತಾಲೂಕಿನ 1321 ನಾಯಿ, ಬೆಕ್ಕುಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಶಿಬಿರದಲ್ಲಿ ಕಂಪ್ಲಿ ಪಶು ಆಸ್ಪತ್ರೆಯಲ್ಲಿ 9, ಎಮ್ಮಿಗನೂರು 15, ಮೆಟ್ರಿ, ದೇವಸಮುದ್ರ ಕೇಂದ್ರಗಳಲ್ಲಿ ತಲಾ 10, ಸುಗ್ಗೇನಹಳ್ಳಿ ಕೇಂದ್ರದಲ್ಲಿ 8 ಸೇರಿ ಒಟ್ಟು 52 ಸಾಕು ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಹಿರಿಯ ಪಶು ವೈದ್ಯ ಪರೀಕ್ಷಕ ಶಿವಪ್ಪ ವಿ.ದೇವಕ್ಕಿ, ಕಿರಿಯ ಪಶು ವೈದ್ಯ ಪರೀಕ್ಷಕ ಉಪಳಪ್ಪ, ಪಶು ಸಖಿಯರಾದ ರೇಣುಕಮ್ಮ, ಲಕ್ಷ್ಮೀ, ಸಿಬ್ಬಂದಿ ರವಿ, ನಾಯಿ ಸಾಕಣೆದಾರ ಜಡೆ ಮಹಾದೇವ ಇತರರಿದ್ದರು.