

ಕಂಪ್ಲಿ: ತಂಬಾಕುಯುಕ್ತ ಪದಾರ್ಥಗಳಿಂದ ಅಸಾಂಕ್ರಾಮಿಕ ಕಾಯಿಲೆ ಕ್ಯಾನ್ಸರ್ ತಗುಲುವ ಸಾಧ್ಯತೆ ಹೆಚ್ಚು ಎಂದು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ರವೀಂದ್ರ ಕನಕೇರಿ ಹೇಳಿದರು.
ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಬದಲಾದ ಜೀವನಶೈಲಿಯಿಂದಾಗಿ ಸ್ತನ, ಗರ್ಭಕಂಠ ಹಾಗೂ ಬಾಯಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಧೂಮಪಾನ, ಮದ್ಯಪಾನ, ತಂಬಾಕುಯುಕ್ತ ಪದಾರ್ಥ ಗಳ ಸೇವನೆಯಿಂದ ವಿಮುಖರಾಗಬೇಕು. ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ನಿತ್ಯ ಯೋಗ, ಧ್ಯಾನ, ವ್ಯಾಯಾಮ, ರಾಸಾಯನಿಕ ಮುಕ್ತ, ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.
ಡಾ.ವೀರೇಶ್, ಡಾ.ಎಚ್.ನಂದೀಶ, ಡಾ.ಹಾರಿಕಾ, ಡಾ.ಶ್ರೀನಿವಾಸರಾವ್, ಡಾ.ವಿಶ್ವನಾಥ, ನೇತ್ರಾಧಿಕಾರಿ ಪ್ರಕಾಶಗೌಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ, ಶುಶ್ರೂಷಕ ದೇವಣ್ಣ, ಆಪ್ತ ಸಮಾಲೋಚಕ ಡಿ.ಎಂ.ಮಹಮ್ಮದ್, ಶೃತಿ, ಚಂದ್ರು ಇತರರಿದ್ದರು.