

ಕಂಪ್ಲಿ: ಸಾರ್ವಜನಿಕರು, ವ್ಯಾಪಾರಿಗಳ ಅನುಕೂಲಕ್ಕೆ ಷಾ.ಮಿಯಾಚಂದ್ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಗುಂಪಾಗಿ ಸೇರುತ್ತಿರುವುದು ಭಾನುವಾರ ಕಂಡುಬಂತು.
ಸಿಪಿಐ ಡಿ.ಹುಲುಗಪ್ಪ, ಪಿಎಸ್‌ಐ ಮೌನೇಶ್ ರಾಥೋಡ್, ಅಂತರ ಕಾಪಾಡಲು ಸೂಚನೆ ನೀಡಿದರು. ಅವರ ಸಮ್ಮುಖದಲ್ಲಿ ಅಂತರ ಕಾಯ್ದುಕೊಂಡ ಜನ ಅವರು ಬೇರೆಡೆ ಹೋಗುತ್ತಿದ್ದಂತೆ ಗುಂಪಾಗಿ ಸೇರಿ ತರಕಾರಿ, ಹಣ್ಣು ಖರೀದಿಸಲು ಮುಂದಾದರು. ಅಲ್ಲದೆ ಕಿರಾಣಿ, ಔಷಧ ಅಂಗಡಿಗಳಲ್ಲಿಯೂ ಅಂತರ ಪಾಲಿಸುತ್ತಿಲ್ಲ. ಗುಂಪು ಗುಂಪಾಗಿ ಓಡಾಡುವುದು, ಕಟ್ಟೆ ಮೇಲೆ ಕುಳಿತು ಮಾತನಾಡುವುದು. ಬೈಕ್‌ಗಳಲ್ಲಿ ಸಂಚರಿಸುವುದು, ಪೇಟೆಗಳಲ್ಲಿ ಗುಂಪಾಗಿ ಓಡಾಡುವುದು ಕಂಡು ಬಂದಿತು. ಪೊಲೀಸರು ರಸ್ತೆಯಲ್ಲಿ ಓಡಾಡುವವರನ್ನು ತಡೆದು ವಾಪಾಸ್ ಕಳುಹಿಸಿದರು. ಎಷ್ಟೇ ಹೇಳಿದರೂ ಜನ ಕೇಳುತ್ತಿಲ್ಲ. ಸಾಮಾಜಿಕ ಕಳಕಳಿಯಿಂದ ಕರ್ತವ್ಯ ನಿರ್ವಹಿಸಿದರೂ ಜನರಿಂದ ಸೂಕ್ತ ಸ್ಪಂದನೆ ದೊರಕುತ್ತಿಲ್ಲ. ಇದರಿಂದ ಬೇಜಾರಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದರು.