ವಿವಿಧ ಕಚೇರಿಗಳಿಗೆ ಬೀಗ

01 KAMPLI 01
Published on

ಕಂಪ್ಲಿ: ಏಳನೇ ವೇತನ ಆಯೋಗ ಅನುಷ್ಠಾನಗೊಳಿಸಬೇಕು, ಒಪಿಎಸ್ ಯೋಜನೆಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಇಲ್ಲಿನ ರಾಜ್ಯ ಸರ್ಕಾರಿ ನೌಕರರ ಸಂಘದವರು ಕರೆ ನೀಡಿದ ಅನಿರ್ದಿಷ್ಟಾವಧಿಯ ಮುಷ್ಕರಕ್ಕೆ ಕಂಪ್ಲಿ ತಾಲೂಕಿನ ಸರ್ಕಾರಿ ನೌಕರರು ಸಕಾರಾತ್ಮಕವಾಗಿ ಸ್ಪಂದಿಸಿದರು.

ತಹಸೀಲ್ದಾರ್ ಗೌಸಿಯಾಬೇಗಮ್ ಮಾತನಾಡಿ, ಚುನಾವಣೆ, ಕಾನೂನು ಸುವ್ಯವಸ್ಥೆ, ಪ್ರಕೃತಿವಿಕೋಪಗಳಂತಹ ತುರ್ತು ಸೇವೆಗಳನ್ನು ಕರ್ನಾಟಕ ಸೇವಾ ಆಡಳಿತ ಅಧಿಕಾರಿಯಾಗಿ ಒದಗಿಸಬೇಕಿದ್ದರಿಂದ ಕಚೇರಿಯಲ್ಲಿ ನಾನು ಕರ್ತವ್ಯನಿರತನಾಗಿದ್ದೇನೆ. ಉಳಿದಂತೆ ಸಿಬ್ಬಂದಿ ಕೇಂದ್ರಸ್ಥಾನದಲ್ಲಿದ್ದು ಅಗತ್ಯಬಿದ್ದರೆ ಕರೆಯಿಸಿಕೊಳ್ಳಲಾಗುವುದು. ಸರ್ಕಾರಿ ನೌಕರರ ಹೋರಾಟಕ್ಕೆ ಸೈದ್ಧಾಂತಿಕ ಬೆಂಬಲ ನೀಡಲಾಗಿದೆ ಎಂದರು.

ತಾಪಂ ಇಒ ಕೆ.ಎಸ್.ಮಲ್ಲನಗೌಡರಿಗೆ ಪಿಡಿಒ ಮತ್ತು ಗ್ರಾಪಂ ಸಿಬ್ಬಂದಿ ಮನವಿ ಸಲ್ಲಿಸಿ, ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳುವುದರಿಂದ ಕರ್ತವ್ಯಕ್ಕೆ ಗೈರಾಗುವುದಾಗಿ ತಿಳಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ, ತುರ್ತು ಚಿಕಿತ್ಸೆ ಹೊರತಾಗಿ ಬೇರೆ ಯಾವುದೇ (ಒಪಿಡಿ)ಚಿಕಿತ್ಸೆ ನೀಡದಿರುವುದರಿಂದ ರೋಗಿಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ್ದರು. ಪಟ್ಟಣದಲ್ಲಿ ತಾಪಂ, ನಾಡ ಕಾರ್ಯಾಲಯ, ಕೃಷಿ, ಉಪಖಜಾನೆ, ಎಪಿಎಂಸಿ, ನೀರಾವರಿ ಮೊದಲಾದ ಕಚೇರಿಗಳಿಗೆ ಬೀಗ ಹಾಕಲಾಗಿತ್ತು. ಹಾಸ್ಟೆಲ್‌ನಲ್ಲಿ ಮಕ್ಕಳಿಗೆ ನಿತ್ಯದ ಸೇವೆಗಳು ದೊರಕಿದವು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಗಿರೀಶ್‌ಬಾಬು ನೇತೃತ್ವದಲ್ಲಿ ಸರ್ಕಾರಿ ಕಚೇರಿಗಳಿಗೆ ತೆರಳಿ ಸರ್ಕಾರಿ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು. ಎಚ್.ದೊಡ್ಡಬಸಪ್ಪ, ಪ್ರಕಾಶಗೌಡ, ವೀರೇಶ್, ಪಿ.ಬಸವರಾಜ, ವಿರೂಪಾಕ್ಷಿ, ವೃಂದ ಸಂಘಗಳ ಪದಾಧಿಕಾರಿಗಳಾದ ಹನುಮಂತಪ್ಪ, ಟಿ.ಎಂ.ಬಸವರಾಜ, ಸುಗ್ಗೇನಹಳ್ಳಿ ರಮೇಶ್, ರೇವಣಸಿದ್ದೇಶ್, ಜಡೆಪ್ಪ, ಅಶೋಕ್, ರಮೇಶ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net