ಕಂಪ್ಲಿ ಪಟ್ಟಣದಲ್ಲಿ ಪೂರ್ಣಗೊಳ್ಳದ ಇಂದಿರಾ ಕ್ಯಾಂಟೀನ್

Kampli Uncompleted Indira Canteen
ಕಂಪ್ಲಿಯ ಹಳೇ ಬಸ್ ನಿಲ್ದಾಣದಲ್ಲಿ ಅಪೂರ್ಣಗೊಂಡ ಇಂದಿರಾ ಕ್ಯಾಂಟೀನ್.
Published on

ಕಂಪ್ಲಿ: ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಮಂಜೂರಾಗಿ ಹತ್ತು ತಿಂಗಳಾದರೂ ಕಾರ್ಯಾರಂಭಗೊಂಡಿಲ್ಲ.ಇಲ್ಲಿನ ಹಳೇ ಬಸ್ ನಿಲ್ದಾಣದ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಪಿಇಬಿ ಕಟ್ಟಡ ಕಾಮಗಾರಿ ಅಪೂರ್ಣಗೊಂಡಿದ್ದು, ಅಕ್ರಮ ಚಟುವಟಿಕೆ ತಾಣವಾಗುತ್ತಿದೆ.

ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಕೈಗೆಟುಕುವ 5 ರೂ. ದರದಲ್ಲಿ ಬೆಳಗಿನ ಉಪಾಹಾರ, 10 ರೂ.ಗೆ ಮಧ್ಯಾಹ್ನ, ಸಂಜೆ ಊಟಗಳನ್ನು ಒದಗಿಸುವ ಇಂದಿರಾ ಕ್ಯಾಂಟೀನ್ ಯೋಜನೆ ಸಾಕಾರಗೊಂಡಿಲ್ಲ. ಇಂದಿರಾ ಕ್ಯಾಂಟೀನ್ ಆರಂಭದಿಂದ ಕಟ್ಟಡ ಕಾರ್ಮಿಕರು, ಗಿಗ್ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಹಮಾಲರಿಗೂ, ಆಟೋ ವಾಹನ ಚಾಲಕರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಲಿದೆ.

ಆದರೆ, ಕಾಮಗಾರಿ ಪೂರ್ಣಗೊಳ್ಳದ ಕಾರಣ ದುರ್ಬಳಕೆ ಆಗುತ್ತಿದೆ. ಅನೈತಿಕ ಚಟುವಟಿಕೆಗಳಿಗೆ ಈಡಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಆರಂಭಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಕಾಮಗಾರಿಯನ್ನು ನಾಲ್ವರು ಗುತ್ತಿಗೆದಾರರಿಗೆ ನೀಡಲಾಗಿದೆ. ಸದ್ಯ ಕಟ್ಟಡ ನಿರ್ಮಾಣಗೊಂಡಿದ್ದು, ಪ್ಲಂಬಿಂಗ್, ಎಲೆಕ್ಟ್ರಿಕ್ ವರ್ಕ್, ಫ್ಯಾಬ್ರಿಕೇಷನ್, ಪ್ರೋರಿಂಗ್, ವಾಟರ್ ಟ್ಯಾಂಕ್ ಕೂಡಿಸುವ ಕಾಮಗಾರಿ ಬಾಕಿ ಇದೆ. ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು, ಶೀಘ್ರ ಪೂರ್ಣಗೊಳಿಸಲಾಗುವುದು.| ಕೆ.ದುರುಗಣ್ಣ, ಪುರಸಭೆ ಮುಖ್ಯಾಧಿಕಾರಿ, ಕಂಪ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net