ಕಂಪ್ಲಿ ಎರಡು ಗೋದಾಮು ಕಾಮಗಾರಿ ಮರು ಆರಂಭ

Kampli warehouse Work
ಅಪೂರ್ಣಗೊಂಡ ಗೋದಾಮುಗಳ ಕಾಮಗಾರಿ ಆರಂಭವಾಗಿರುವುದು.
Published on

ಕಂಪ್ಲಿ: ಇಲ್ಲಿನ ಚಿಕ್ಕಜಾಯಿಗನೂರು ರಸ್ತೆಯಲ್ಲಿ ಸ್ಥಗಿತಗೊಂಡಿದ್ದ ಉಗ್ರಾಣ ನಿರ್ಮಾಣ ಕಾಮಗಾರಿ ಮತ್ತೆ ಆರಂಭವಾಗಿದ್ದು, ಭರದಿಂದ ಸಾಗಿದೆ.

ಜಿಲ್ಲಾ ಕೃಷಿ ತರಬೇತಿ ಕೇಂದ್ರವು 2016-17ರಲ್ಲಿ ರಾಜ್ಯ ಉಗ್ರಾಣ ನಿಗಮಕ್ಕೆ 30ವರ್ಷಗಳ ಒಪ್ಪಂದ ಮೇರೆಗೆ ರೈತರ ಅನುಕೂಲಕ್ಕಾಗಿ ಉಗ್ರಾಣ ನಿರ್ಮಿಸಲು 25 ಎಕರೆ ಜಮೀನು ನೀಡಿತ್ತು. ರಾಜ್ಯ ಉಗ್ರಾಣ ನಿಗಮ 2015-16ನೇ ಸಾಲಿನ ನಬಾರ್ಡ್ ಆರ್ಥಿಕ ನೆರವಿನಿಂದ ಆರ್‌ಕೆವಿವೈ ಯೋಜನೆಯಡಿ 6580 ಮೆಟ್ರಿಕ್ ಟನ್ ಸಾಮರ್ಥ್ಯದ ಮತ್ತು 7130 ಮೆಟ್ರಿಕ್ ಟನ್ ಸಾಮರ್ಥ್ಯದ ತಲಾ ಒಂದು ಉಗ್ರಾಣ ನಿರ್ಮಿಸಿದೆ.

ಆದರೆ, ಇದರ ಪಕ್ಕದಲ್ಲಿಯೇ 7130 ಮೆಟ್ರಿಕ್ ಟನ್ ಸಾಮರ್ಥ್ಯದ ಇನ್ನೆರಡು ಉಗ್ರಾಣಗಳ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದ್ದವು. ಇದರಿಂದ ಗಿಡಗಂಟಿ ಬೆಳೆದು ವಿಷಜಂತುಗಳ ಅವಾಸಸ್ಥಾನವಾಗಿ ಮಾರ್ಪಟ್ಟಿದ್ದವು.

ಇದೀಗ ಎರಡು ಉಗ್ರಾಣಗಳ ಕಾಮಗಾರಿ ಆರಂಭಗೊಂಡಿದ್ದು ಛಾವಣಿ ಶೀಟ್, ಸ್ಟೀಲ್ ಫ್ಯಾಬ್ರಿಕೇಷನ್, ನೆಲಹಾಸು, ಪೇಂಟಿಂಗ್ ಸೇರಿ ಅಗತ್ಯ ಕಾಮಗಾರಿ ನಡೆದಿದೆ. ಗೋದಾಮು ಸಂಕೀರ್ಣದಲ್ಲಿ ಸಿಸಿ ರಸ್ತೆ ನಡೆದಿದ್ದು, ಚಿಕ್ಕಜಾಯಿಗನೂರು ರಸ್ತೆಯಿಂದ ಗೋದಾಮುಗೆ ಸಂಪರ್ಕಿಸುವ ಲಿಂಕ್ ರಸ್ತೆ ಕಾಮಗಾರಿ ಕೈಗೊಳ್ಳಬೇಕಿದೆ. ಆರೇಳು ವರ್ಷಗಳ ನಂತರ ಕಾಮಗಾರಿ ಆರಂಭವಾಗಿರುವುದು ರೈತರು ಖುಷಿಯಾಗಿದ್ದು, ಭತ್ತ, ಜೋಳ ಧಾನ್ಯ ಸಂಗ್ರಹಕ್ಕೆ ಅನುಕೂಲವಾಗಲಿದೆ.

ಡಬ್ಲುೃಐಎಫ್-ಎನ್‌ಡಬ್ಲುೃಸಿ 2015-16ರ ಯೋಜನೆಯಡಿ 17 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಗೋದಾಮುಗಳನ್ನು ನಿರ್ಮಿಸಲು ಯೋಜಿಸಿದ್ದು, ಅಪೂರ್ಣಗೊಂಡ ಎರಡು ಉಗ್ರಾಣಗಳನ್ನು ಪರಿಷ್ಕೃತ ದರದಲ್ಲಿ ಪೂರ್ಣಗೊಳಿಸಲು ಕ್ಯಾಬಿನೆಟ್‌ನಲ್ಲಿ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಲಾಗಿದೆ. ಛಾವಣಿ ಹಂತದ ಕಾಮಗಾರಿ ಬಾಕಿ ಇದ್ದು 2024ರ ಆಗಸ್ಟ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ ರೈತರ ಬಳಕೆಗೆ ನೀಡಲಾಗುವುದು.| ನೇಣ್ಕಿ ಸಣ್ಣ ಯಲ್ಲಪ್ಪ, ಎಇ, ರಾಜ್ಯ ಉಗ್ರಾಣ ನಿಗಮ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net