

ಕಂಪ್ಲಿ: ಪಟ್ಟಣದಲ್ಲಿನ ತುಂಗಭದ್ರಾ ನದಿಗೆ ಶುಕ್ರವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಸಮೃದ್ಧ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಬಾಗಿನ ಅರ್ಪಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ತುಂಗಭದ್ರಾ ನದಿಗೆ ನೆರೆ ಬಂದಾಗ ಮಾತ್ರ ಅಧಿಕಾರಿ, ಜನಪ್ರತಿನಿಧಿಗಳಿಗೆ ಹೊಸ ಸೇತುವೆ ನಿರ್ಮಾಣ ನೆನಪಾಗುತ್ತದೆ. ಇಲ್ಲಿನ ಸೇತುವೆ ಶಿಥಿಲಗೊಂಡಿದ್ದು ಹೊಸ ಸೇತುವೆ ನಿರ್ಮಿಸುವಂತೆ ಅನೇಕ ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಮಂಜೂರಾಗಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಹೊಸ ಸೇತುವೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಬೇಕಿದೆ. ಕೇವಲ ಭರವಸೆಯಾಗದೆ ಅನುದಾನ ಮಂಜೂರು ಮಾಡಿ ಕಾರ್ಯಗತಗೊಳಿಸಬೇಕಿದೆ. ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹಗೊಂಡಿದ್ದು ಎರಡನೇ ಬೆಳೆಗೂ ನೀರು ಕೊಡುವಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಜಾಗೃತರಾಗಬೇಕು ಎಂದು ಒತ್ತಾಯಿಸಿದರು.
ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿ, ಕಳೆದ ವರ್ಷವೇ ಸೇತುವೆ ನಿರ್ಮಾಣಕ್ಕೆ 69 ಕೋಟಿ ರೂ. ಮಂಜೂರಾಗಿದೆ ಎನ್ನಲಾಗಿದ್ದರೂ ಕಾರ್ಯಗತವಾಗಿಲ್ಲ. ಕನಕಗಿರಿ ಶಾಸಕರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು, ಕಂಪ್ಲಿ ಶಾಸಕರು ಸಮನ್ವಯ ಸಾಧಿಸಿ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರವನ್ನು ಒತ್ತಾಯಿಸಬೇಕಿದೆ ಎಂದರು.
ಪಾಠಶಾಲೆ ಪ್ರಾಚಾರ್ಯ ಘನಮಠದಯ್ಯ ಹಿರೇಮಠ, ಶರಣಬಸವ ಪೌರೋಹಿತ್ಯದಲ್ಲಿ ಗಂಗೆಪೂಜೆ ನೆರವೇರಿಸಿ ನದಿಗೆ ಬಾಗಿನ ಅರ್ಪಿಸಲಾಯಿತು.
ರೈತ ಸಂಘದ ನಗರ ಅಧ್ಯಕ್ಷ ಕೊಟ್ಟೂರು ರಮೇಶ, ಜಿಲ್ಲಾ ಉಪಾಧ್ಯಕ್ಷ ಆನಂದರೆಡ್ಡಿ, ಪ್ರಮುಖರಾದ ನವೀನ್ ಮಣ್ಣೂರು, ಡಿ.ಮುರಾರಿ, ಆದೋನಿ ರಂಗಪ್ಪ, ವಾಲಿ ಕೊಟ್ರಪ್ಪ, ಎಂ.ಸಿ.ಮಾಯಪ್ಪ, ತಿಮ್ಮಪ್ಪ ನಾಯಕ, ಸಣಾಪುರ ಪ್ರಕಾಶ, ವೆಂಕಟರಮಣ, ಪತ್ತಾರ ಯಮುನಪ್ಪ ಸೇರಿ ಇತರರಿದ್ದರು.