ಸೇತುವೆ ಮೇಲೆ ಹರಿಯುತ್ತಿರುವ ನೀರು, ಗಂಗಾವತಿ - ಕಂಪ್ಲಿ ಸಂಚಾರ ಸ್ಥಗಿತ

19082020 Kampli Gangavati tungabhadra river bridze
Published on

ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಬುಧವಾರ ಬೆಳಗ್ಗೆ 10 ಗಂಟೆಯಿಂದ ಸೇತುವೆ ಮೇಲಿನ ಸಂಚಾರವನ್ನು ನಿಷೇಧಿಸಲಾಯಿತು.

ಮಧ್ಯಾಹ್ನದ ಹೊತ್ತಿಗೆ ಸೇತುವೆ ಮೇಲೆ ನೀರು ಹರಿಯಿತು. ನದಿ ತಟದ ಮಂಟಪ ಮುಳುಗಡೆಗೊಂಡಿದೆ. ನದಿ ಸೇತುವೆ ವೀಕ್ಷಿಸಿದ ತಹಸೀಲ್ದಾರ್ ಗೌಸಿಯಾಬೇಗಂ ಮಾತನಾಡಿ, ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣ ನೀರು ಹರಿದು ಬರುತ್ತಿದ್ದರಿಂದ ಸೇತುವೆ ಮೇಲಿನ ಸಂಚಾರ ನಿಷೇಧಿಸಲಾಗಿದೆ. ನೀರಿನ ಪ್ರಮಾಣ ಹೆಚ್ಚಾದಲ್ಲಿ ದಡದಲ್ಲಿರುವ ಮೀನುಗಾರರು ಸೇರಿ 54 ಕುಟುಂಬಗಳ ಮನೆಗಳು ಜಲಾವೃತಗೊಳ್ಳಲಿವೆ. ಈ ನಿಟ್ಟಿನಲ್ಲಿ ಮೀನುಗಾರರ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲು ಸೂಚನೆ ನೀಡಲಾಗಿದೆ. ನದಿ ತಟದ ಹೊಲಗದ್ದೆಗಳಿಗೆ ತೆರಳದಂತೆ, ನದಿಗಿಳಿಯದಂತೆ ಗ್ರಾಮಸ್ಥರಿಗೂ ಡಂಗುರ ಮೂಲಕ ಎಚ್ಚರಿಸಲಾಗಿದೆ. ಕೋಟೆಯ ನದಿ ತಟದಲ್ಲಿನ ಸಕಿಪ್ರಾ ಶಾಲೆಯಲ್ಲಿ ತಾತ್ಕಾಲಿಕ ಕಾಳಜಿ ಕೇಂದ್ರವನ್ನು ತೆರೆದಿದ್ದು, ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಲ್ಲಿ ತಳವಾರ ಓಣಿಯ 8ನೇವಾರ್ಡ್ ಸಹಿಪ್ರಾ ಶಾಲೆಯಲ್ಲಿ ಕಾಳಜಿ ಕೇಂದ್ರ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಹೊಸಪೇಟೆಯ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಅಖ್ತರ್ ಮಾತನಾಡಿ, ಹೊಸಪೇಟೆಯಿಂದ ಕಂಪ್ಲಿ ತಾಲೂಕಿನ ಇಟಗಿ ಗ್ರಾಮತನಕ ನದಿ ತಟ ವೀಕ್ಷಿಸಿದ್ದು, ಯಾವುದೇ ಜಾನುವಾರುಗಳ ಸಾವು ನೋವು ಆಗಿಲ್ಲ ಎಂದು ಹೇಳಿದರು. ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್, ಗ್ರಾಮ ಲೆಕ್ಕಾಧಿಕಾರಿ ಜಿಲಾನ್, ಪುರಸಭೆ ಪರಿಸರ ಇಂಜಿನಿಯರ್ ಜಿ.ಆರತಿ , ಆರೋಗ್ಯ ನಿರೀಕ್ಷಕರಾದ ಪ್ರಕಾಶ್‌ಬಾಬು, ಎ.ಕೆ.ರಾಧಿಕಾ ಸೇರಿ ಕಂದಾಯ, ಜೆಸ್ಕಾಂ, ಪುರಸಭೆ, ಪೊಲೀಸ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net