ಕಾಳಜಿ ಕೇಂದ್ರಕ್ಕೆ ಬಾರದ ನದಿ ತೀರದ ಸಂತ್ರಸ್ತರು

Kampli flood
ಕಂಪ್ಲಿ ಕೋಟೆಯೊಳಗೆ ಕಾಳಜಿ ಕೇಂದ್ರ ತೆರೆಯಬೇಕೆಂದು ಒತ್ತಾಯಿಸುತ್ತಿರುವ ಸಂತ್ರಸ್ತರಾದ ಹುಲಿಗೆಮ್ಮ ಆದಿಮನೆ, ಓರ‌್ವಾಯಿ ಗಂಗಮ್ಮ, ಮುದ್ದಾಪುರ ಹನುಮಂತಮ್ಮ, ಶೆರೆಗಾರ ಶಾಂತಾ ಇತರರು.
Published on

ಕಂಪ್ಲಿ ಕೋಟೆ ಪ್ರದೇಶದಲ್ಲೇ ತೆರೆಯಬೇಕೆಂಬ ಒತ್ತಾಯ | ಈವರೆಗೆ ಕಲ್ಪಿಸಿಲ್ಲ ನಿವೇಶನ

ಕಂಪ್ಲಿ ಕೋಟೆಯ ಪಂಪಾಪತಿ ದೇವಸ್ಥಾನದ ರಸ್ತೆ ಜಲಾವೃತಗೊಂಡಿರುವುದು.

ಕಂಪ್ಲಿ: ಇಲ್ಲಿನ ತುಂಗಭದ್ರಾ ನದಿ ಪ್ರವಾಹದ ಸಂತ್ರಸ್ತರು ಮತ್ತು ತಾಲೂಕು ಆಡಳಿತದ ಮಧ್ಯೆ ಕಾಳಜಿ ಕೇಂದ್ರ ಕುರಿತಾಗಿ ಶೀತಲ ಸಮರ ಸಾಗಿದೆ. ಪಟ್ಟಣದ ಎಂಟನೇ ವಾರ್ಡ್ ಸಹಿಪ್ರಾ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದಿದ್ದರೂ ಸಂತ್ರಸ್ತರು ತೆರಳುತ್ತಿಲ್ಲ. ಕೋಟೆ ಪ್ರದೇಶದಲ್ಲೇ ಕೇಂದ್ರ ತೆರೆಯಬೇಕೆಂಬ ಒತ್ತಾಯ ಅವರದು.

ಕೋಟೆ ಪ್ರದೇಶದ ಒಂದನೇ ವಾರ್ಡ್ ಗಂಗಮ್ಮನ ದಿಡ್ಡಿ ಪ್ರದೇಶದಲ್ಲಿ ನದಿ ತಟದಲ್ಲಿನ ಮನೆಗಳು ಅಪಾಯ ಸ್ಥಿತಿಯಲ್ಲಿವೆ. ನೀರು ಬರುತ್ತದೆ ಎಂದು ಏಕಾಏಕಿ ಮನೆ ಬಿಡಿಸಿದ್ದರಿಂದ ಬೇರೆಮನೆಯಲ್ಲಿ ಸಾಮಾನು ಹಾಕಿದ್ದೇನೆ. ಊಟದ ಚಿಂತೆಯಾಗಿದೆ. ಎಲ್ಲೋ ಕಾಳಜಿ ಕೇಂದ್ರ ತೆರೆದರೆ ನಮ್ಮಂಥ ವೃದ್ಧರ ಗತಿ ಏನು ಎಂದು ಹಾದಿಮನೆ ಹುಲಿಗೆಮ್ಮ ಪ್ರಶಿಸಿದರು. 1992ರಲ್ಲೇ ಇಲ್ಲಿನ ಮನೆಗಳನ್ನು ಬಿಡಿಸಿ ನಿವೇಶನ ಕೊಡುತ್ತೇವೆಂದು ಹೇಳಿದ್ದು, ಈತನಕವೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಓರ‌್ವಾಯಿ ಗಂಗಮ್ಮ ಬೇಸರ ವ್ಯಕ್ತಪಡಿಸಿದರು.

ಕಂಪ್ಲಿ ಎಂಟನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರದ ಹೊರನೋಟ.
ಕಂಪ್ಲಿ ಎಂಟನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರದ ಹೊರನೋಟ.

ಮೀನುಬೇಟೆ ಇಲ್ಲ, ಇತ್ತ ಕೃಷಿ ಕೂಲಿ ಇಲ್ಲ, ದುಡಿಮೆಯೂ ಇಲ್ಲ. ಊಟಕ್ಕೆ ತತ್ವಾರವಾಗಿದೆ. ಕೋಟೆ ಪ್ರದೇಶದೊಳಗೆ ಕಾಳಜಿ ಕೇಂದ್ರ ತೆರೆಯಬೇಕು. ಅದು ಬಿಟ್ಟು ಎಲ್ಲೋ ತೆರೆದರೆ ವೃದ್ಧರು ಹೋಗಲು ಆಗಲ್ಲ ಎಂದು ಮೀನುಗಾರ ಲಕ್ಷ್ಮೀ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಇಲ್ಲಿಗೆ ಪಾಕೆಟ್ ಆಹಾರ ಒದಗಿಸಲಿ ಎನ್ನುವುದು ಸೆರೆಗಾರ ಶಾಂತ, ನಾಗೇನಹಳ್ಳಿ ಹನುಮಂತಿ ಅವರ ಒತ್ತಾಯ. ಪೊಲೀಸರು ಮನೆ ಬಿಟ್ಟು ಹೋಗಿ ಅಂತಾರೆ. ಕೋಟೆಯ ಅಗಸಿ ಬಳಿಯ ಗರಡಿ ಕಟ್ಟೆ ಹಿಂದೆ ಕಾಳಜಿ ಕೇಂದ್ರ ತೆರೆಯಲಿ, ಅಲ್ಲಿಗೆ ಹೋಗಿ ಬರಬಹುದು. ನಮ್ಮ ತಿಪ್ಲ ನಮಗೆ ಎಂದು ಮುದ್ದಾಪುರ ಹನುಮಂತಮ್ಮ ಸಂಕಟ ವ್ಯಕ್ತಪಡಿಸಿದ್ದಾರೆ.

ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು

ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ನದಿಗೆ 1.50ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿದ್ದರಿಂದ ನದಿಪಾತ್ರದ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ಸೇತುವೆಯ ರಕ್ಷಣಾ ಕಂಬಿಗಳಿಗೆ ಜಲಸಸ್ಯಗಳು ಅಡರಿ ನಿಂತಿವೆ. ಕೋಟೆ ಮಹಾದ್ವಾರ, ಮೀನುಗಾರ ಕಾಳಮ್ಮ ಗುಡಿಗೆ ನೀರು ನುಗ್ಗಿದೆ. ಸುಂಕ್ಲಮ್ಮ ಗುಡಿ ಪಕ್ಕದ ಬಾಳೆ ತೋಟಕ್ಕೆ, ಸುಂಕ್ಲಮ್ಮನ ಪಾದಗಟ್ಟೆ, ಲಕ್ಷ್ಮೀ ವೆಂಕಟ ರಮಣ, ಹೊಳೆ ಆಂಜನೇಯ ದೇವಸ್ಥಾನ ಜಲಾವೃತ ಗೊಂಡಿವೆ. ನದಿಗೆ ಜನರು ಇಳಿಯದಂತೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಮಾರ್ಗಸೂಚಿಯಂತೆ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಕೈಗೊಂಡಿದೆ. ಕಾಳಜಿ ಕೇಂದ್ರಕ್ಕೆ ಬಂದಲ್ಲಿ ಎಲ್ಲ ಸೌಲಭ್ಯ ಒದಗಿಸಲಾಗುವುದು.|ಎಸ್.ಶಿವರಾಜ ತಹಸೀಲ್ದಾರ್, ಕಂಪ್ಲಿ ಶೌಚಗೃಹ ತೆರವುಗೊಳಿಸಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಲಾಗಿದೆ. ತಾತ್ಪೂರ್ತಿಕ ವಾಗಿ ದುರಸ್ತಿ ಗೊಳಿಸಿದೆ. ಅಲ್ಲಿನ ಜನತೆ ಸೂಕ್ತವಾಗಿ ಬಳಸುವಲ್ಲಿ ಮುಂದಾಗಬೇಕು.|ಕೆ.ದುರುಗಣ್ಣ ಮುಖ್ಯಾಧಿಕಾರಿ, ಕಂಪ್ಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net