

ಕಂಪ್ಲಿ: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಬಾಲಕ ಗೌತಮ್ ನಾಗರಾಜ ವದ್ನಾಳ್ ಗುರುವಾರ ನಾಲ್ಕನೆಯ ದಿನವೂ ಪತ್ತೆಯಾಗಿಲ್ಲ. ಗಂಗಾವತಿಯ ಅಗ್ನಿಶಾಮಕ ಅಧಿಕಾರಿ ಆರ್.ಎಲ್.ಪೂಜಾರಿ ನೇತೃತ್ವದಲ್ಲಿ ಹುಡುಕಾಟ ನಡೆದಿದೆ.
ಗಂಗಾವತಿ ಪವನ್ ಶರಣಪ್ಪ ಕಟ್ಟಿಮನಿ (14) ಹಾಗೂ ಬಹದ್ದೂರ ಬಂಡಿಯ ಗೌತಮ್ ನಾಗರಾಜ ವದ್ನಾಳ್ ಮದುವೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ನೀರಿನಲ್ಲಿ ಬಿಡುವಾಗ ಮೇ 19 ರಂದು ಚಿಕ್ಕಜಂತಕಲ್ ಬಳಿ ತುಂಗಭದ್ರಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಪವನ್ ಶವವಾಗಿ ಪತ್ತೆಯಾಗಿದ್ದು, ಗೌತಮ್‌ಗಾಗಿ ಶೋಧ ಕಾರ್ಯ ನಡೆದಿದೆ.
ಚಿಕ್ಕಜಂತಕಲ್ ಗ್ರಾಮದ ಗಂಗಮ್ಮ ಗುಡಿ ಬಳಿ ನದಿಗೆ ಈಜಲು ಹೋದವರು ಪೈಕಿ ಕೆಲವರು ಶವವಾಗಿ ಪತ್ತೆಯಾಗುತ್ತಿದ್ದಾರೆ. ಅಪಾಯ ಅರಿಯದೆ ಶುಭ, ಅಶುಭ ಕಾರ್ಯಗಳಿಗಾಗಿ ಬೇರೆಡೆಯಿಂದ ಬಂದವರು ನದಿಗಿಳಿದು ಪ್ರಾಣಾಪಾಯಕ್ಕೀಡಾಗುತ್ತಿದ್ದಾರೆ.
ಅಕ್ರಮ ಮರಳುಗಾರಿಕೆಯಿಂದ ಜೀವಕ್ಕೆ ಕುತ್ತು ಗಂಗಮ್ಮ ಗುಡಿ ಮುಂಭಾಗದ ನದಿ ತಟದಲ್ಲಿ ಅವೈಜ್ಞಾನಿಕವಾಗಿ ಮರಳು ತೆಗೆದಿದ್ದರಿಂದ 15 ಅಡಿ ಆಳದ ಗುಂಡಿಗಳಾಗಿವೆ. ಮರಳು ಗುಂಡಿಗಳೇ ನದಿಗೆ ಇಳಿಯುತ್ತಿರುವವರ ಪ್ರಾಣಕ್ಕೆ ಸಂಚಕಾರ ತರುತ್ತಿವೆ. ನದಿಗೆ ಸ್ನಾನಕ್ಕೆ ಬಂದವರು ನದಿ ನೀರಲ್ಲೇ ವಸ್ತ್ರ ಬಿಡುವುದರಿಂದ ಇದು ಕೂಡ ಸಮಸ್ಯೆಗೆ ಕಾರಣವಾಗುತ್ತಿವೆ. ಗಂಗಮ್ಮನ ಗುಡಿ ಬಳಿ ಅಪಾಯದ ಎಚ್ಚರಿಕೆಯ ಬರಹ ಗಮನಕ್ಕೆ ಬರದಂತಿದೆ. ಚಿಕ್ಕಜಂತಕಲ್ ಭಾಗದ ಗಂಗಮ್ಮ ಗುಡಿ ಬಳಿ ಕನಿಷ್ಠ ಐವತ್ತು ಮೀಟರ್‌ವ್ಯಾಪ್ತಿಯಲ್ಲಿ ಎರಡೂ ಕಡೆ ಮರಳುಗಾರಿಕೆ ತಡೆಯಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕಿದೆ. ಈ ಭಾಗದಲ್ಲಿ ಜನರು ನದಿಗೆ ಇಳಿಯದಂತೆ ಎಚ್ಚರ ವಹಿಸಲು ಸಿಬ್ಬಂದಿ ನೇಮಿಸಬೇಕಿದೆ. ಜಿಂದಾಲ್ ಮುಳುಗು ತಜ್ಞರು ಮೇ 21 ರಂದು ಹುಡುಕಿದ್ದು, ಬಾಲಕ ಪತ್ತೆಯಾಗಿಲ್ಲ. ಇದರಿಂದಾಗಿ ಗುರುವಾರವೂ ಪತ್ತೆ ಕಾರ್ಯಾಚರಣೆ ಮುಂದುವರಿಸಲಾಯಿತು. ಆರ್.ಎಲ್.ಪೂಜಾರಿ ಅಗ್ನಿಶಾಮಕ ಅಧಿಕಾರಿ, ಗಂಗಾವತಿ ನೀರಿನಲ್ಲಿ ಇಳಿಯದಂತೆ ನದಿ ಬಳಿ ಎರಡು ಮೂರು ಸಲ ಎಚ್ಚರಿಕೆ ಫಲಕ ಹಾಕಿದ್ದು ನೆರೆಗೆ ಕೊಚ್ಚಿ ಹೋಗಿದೆ. ನದಿ ಪ್ರವೇಶಿಸುವ ಸ್ಥಳದಲ್ಲಿ ಗೇಟ್ ಅಳವಡಿಸಲಾಗುವುದು. ನದಿಯಲ್ಲಿ ಈಜುವುದನ್ನು ತಡೆಯಲು ಚೈನ್ ಹಾಕಿಸಲಾಗುವುದು. ಗಂಗಮ್ಮನ ಗುಡಿ ಬಳಿಯಲ್ಲಿ ಮರಳು ಅಗೆಯುವುದನ್ನು ಪ್ರತಿಬಂಧಿಸಲಾಗುವುದು. ಅಕ್ರಮ ಮರಳುಗಾರಿಕೆಯನ್ನು ತಡೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ನೇತ್ರಾವತಿ ಯಂಕೋಬಾ ಭಂಗಿ ಗ್ರಾಪಂ ಅಧ್ಯಕ್ಷೆ, ಚಿಕ್ಕಜಂತಕಲ್