ಪ್ರವಾಹ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿ

Untitled design(9)
ಕಂಪ್ಲಿಯಲ್ಲಿ ಪ್ರಕೃತಿ ವಿಕೋಪ ಮುಂಜಾಗ್ರತಾ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಎಸ್.ಶಿವರಾಜ ಮಾತನಾಡಿದರು. ಅಧಿಕಾರಿಗಳಾದ ಆರ್.ಕೆ.ಶ್ರೀಕುಮಾರ್, ಕೆ.ಎಸ್.ಮಲ್ಲನಗೌಡ, ಬಿ.ರವೀಂದ್ರಕುಮಾರ್, ಕೆ.ದುರುಗಣ್ಣ, ಕೆ.ಬಿ.ವಾಸುಕುಮಾರ್ ಇದ್ದರು.
Published on

ಕಂಪ್ಲಿ: ಜಲಾಶಯದಿಂದ ತುಂಗಭದ್ರಾ ನದಿಗೆ ಯಾವುದೇ ಕ್ಷಣದಲ್ಲಿ ಹೆಚ್ಚಿನ ಪ್ರಮಾಣ ನೀರು ಹರಿಸಬಹುದು. ಇದರಿಂದ ಪ್ರವಾಹ ಉಂಟಾಗುವ ಸಾಧ್ಯತೆಯಿದೆ. ಪ್ರವಾಹ, ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ನಿಭಾಯಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯ ಸಾಧಿಸಬೇಕಿದೆ ಎಂದು ತಹಸೀಲ್ದಾರ್ ಎಸ್.ಶಿವರಾಜ ಹೇಳಿದರು.

ಇಲ್ಲಿನ ತಹಸಿಲ್ ಸಭಾಂಗಣದಲ್ಲಿ ಪ್ರವಾಹ, ಪ್ರಕೃತಿ ವಿಕೋಪ ಮುಂಜಾಗ್ರತೆ ಪೂರ್ವಭಾವಿ ಸಭೆಯಲ್ಲಿ ಗುರುವಾರ ಮಾತನಾಡಿದರು. ಜನತೆ ನದಿಗೆ ಬಟ್ಟೆ ಒಗೆಯಲು, ಮೀನು ಹಿಡಿಯಲು ಇಳಿಯಬಾರದು. ಸುರಕ್ಷಿತ ಸ್ಥಳಕ್ಕೆ ಜನಜಾನುವಾರುಗಳೊಂದಿಗೆ ತೆರಳುವಂತೆ ಸ್ಥಳೀಯ ಆಡಳಿತ ಡಂಗೂರ ಹೊರಡಿಸಿ , ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಶಿಕ್ಷಣ ಇಲಾಖೆ ಮತ್ತು ಸಿಡಿಪಿಒ ಇಲಾಖೆ ಪ್ರವಾಹ ಸಂತ್ರಸ್ಥರಿಗೆ ಕಾಳಜಿ ಕೇಂದ್ರ ತೆರೆಯಲು, ಅಡುಗೆದಾರರು, ಅಡುಗೆ ಸಾಮಾನುಗಳ ತಯಾರಿ ಸೇರಿ ಸೂಕ್ತ ಮುಂಜಾಗ್ರತೆವಹಿಸಬೇಕು. ಬೆಳೆನಾಶ, ಜೀವಪ್ರಾಣ ಹಾನಿಯಾದಲ್ಲಿ 24 ಗಂಟೆಯೊಳಗೆ ಪರಿಹಾರ ಒದಗಿಸಬೇಕಿದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಸದಾ ಜಾಗೂರುಕರಾಗಿರಬೇಕು. ಶಿಥಿಲಗೊಂಡ ಕಚ್ಚಾಮನೆಗಳ ಪಟ್ಟಿ ಮಾಡಿ ವಾಸಸ್ಥರಿಗೆ ಸೂಕ್ತ ತಿಳುವಳಿಕೆ ನೀಡಬೇಕು. ಪ್ರವಾಹ ಸಂದರ್ಭದಲ್ಲಿ ಸೇತುವೆ, ನದಿಪಾತ್ರದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಲು ಬ್ಯಾರಿಕೇಡ್, ಸಿಬ್ಬಂದಿ ನಿಯೋಜನೆ ಸೇರಿ ಮುನ್ನೆಚ್ಚರಿಕೆವಹಿಸಬೇಕು. ಚರಂಡಿ ನೀರು ಕುಡಿವ ನೀರಿಗೆ ಸೇರದಂತೆ ಶುದ್ಧ ನೀರು ಪೂರೈಸುವಲ್ಲಿ ಸ್ಥಳೀಯ ಆಡಳಿತ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಪ್ರವಾಹ ಮತ್ತು ನಂತರದಲ್ಲಿ ಹಾವು, ವಿಷಜಂತುಗಳ ಬಾಧೆ ನಿವಾರಣೆ, ಸಾಂಕ್ರಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ನಿಗಾವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿನ ವಿಪತ್ತು ನಿರ್ವಹಣಾ ಸಮಿತಿ ಕ್ರಿಯಾಶೀಲವಾಗಿರಬೇಕು. ಅಧಿಕಾರಿಗಳು ಸದಾ ಮೊಬೈಲ್ ಕೆರೆಗಳನ್ನು ಸ್ವೀಕರಿಸಿ ಸ್ಪಂದಿಸಬೇಕು. ಕಂಪ್ಲಿ, ಬೆಳಗೋಡು, ಇಟಗಿ, ಸಣಾಪುರಗಳ ನದಿಪಾತ್ರದ ಮೇಲೆ ಗಮನಹರಿಸಬೇಕು. ಪ್ರವಾಹ ಸಂದರ್ಭದಲ್ಲಿ ದಿಢೀರ್ ಎದುರಾಗುವ ವಿಪತ್ತುಗಳನ್ನು ಸಮರ್ಥವಾಗಿ ನಿಭಾಯಿಸಲು ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಪಂ ಇಒ ಆರ್.ಕೆ.ಶ್ರೀಕುಮಾರ್, ಎಡಿ ಕೆ.ಎಸ್.ಮಲ್ಲನಗೌಡ, ಡಿಟಿ ಬಿ.ರವೀಂದ್ರಕುಮಾರ್, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಬಿ.ವಾಸುಕುಮಾರ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net