

ಕಂಪ್ಲಿ: ಇಲ್ಲಿನ ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟೌನ್ ವೆಂಡರ್ ಕಮಿಟಿ ಸಭೆ ಮಂಗಳವಾರ ನಡೆಯಿತು. ಸ್ವ-ನಿಧಿ ಸೇ ಸಮೃದ್ಧಿ ಯೋಜನೆ ಕುರಿತು ಸದಸ್ಯರಿಗೆ ಮಾಹಿತಿ ನೀಡಲಾಯಿತು.
ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳು ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪಟ್ಟಣದಲ್ಲಿ 470 ನೋಂದಾಯಿತ ಬೀದಿಬದಿ ವ್ಯಾಪಾರಿಗಳಿಗೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಸ್ವ-ನಿಧಿ ಸೇ ಸಮೃದ್ಧಿ ಸೇರಿ ನಾನಾ ಯೋಜನೆಗಳನ್ನು ತಲುಪಿಸಲಾಗುವುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಅಗತ್ಯ ಸೌಲಭ್ಯ ಪಡೆದುಕೊಳ್ಳಬೇಕು. ಸಕಾಲದಲ್ಲಿ ಸಾಲ ಮರುಪಾವತಿಸುವಂತೆ ವೆಂಡರ್ ಕಮಿಟಿ ಸದಸ್ಯರು ಸಾಲ ಪಡೆದ ಬೀದಿ ಬದಿ ವ್ಯಾಪಾರಿಗಳಲ್ಲಿ ಜಾಗೃತಿಮೂಡಿಸಬೇಕು. ಬೀದಿ ಬದಿ ವ್ಯಾಪಾರಿಗಳು ಸುರಕ್ಷಿತ ಸ್ಥಳದಲ್ಲಿ ವ್ಯಾಪಾರ ಮಾಡಬೇಕು ಎಂದರು.
ವೆಂಡರ್ ಕಮಿಟಿ ಸದಸ್ಯ ಕೆ.ರಂಗಪ್ಪ ಮನವಿ ಸಲ್ಲಿಸಿ, ಬೀದಿಬದಿ ವ್ಯಾಪಾರಿಗಳಿಗೆ ರಾಷ್ಟ್ರೀಯ ಬ್ಯಾಂಕ್‌ಗಳ ಮೂಲಕ ಸೌಲ ಸೌಲಭ್ಯ ಕೊಡಿಸಬೇಕು. ತಳ್ಳುಗಾಡಿಗಳನ್ನು, ಅಗತ್ಯ ಮೂಲಸೌಕರ್ಯ ಒದಗಿಸಬೇಕು. ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆದು ಇಲಾಖೆಗಳ ಸೌಲಭ್ಯಗಳನ್ನು ಒದಗಿಸುವಲ್ಲಿ ಜಾಗೃತಿ ತೋರಬೇಕು ಎಂದು ಒತ್ತಾಯಿಸಿದರು. ವೆಂಡರ್ ಕಮಿಟಿ ಸದಸ್ಯರಾದ ವನಿತಾ, ಸಾಕಮ್ಮ, ಭವಾನಿ, ಖಾಸಿಂವಲಿ, ಸಿದ್ಧಯ್ಯ, ಕನಕ, ಡಿ.ನಾಗರಾಜ, ಅಕ್ಬರ್‌ಅಲಿ, ಸಮುದಾಯ ಸಂಯೋಜಕಿ ಎಂ.ವಸಂತಮ್ಮ, ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ರೇಣುಕಾ, ರೋಜಮ್ಮ ಇತರರಿದ್ದರು.