ರಸ್ತೆಗೆ ಮಾರಕವಾದ ಕೇಜ್‌ವ್ಹೀಲ್ ಬಳಕೆ

Kampli Tractor Cagewheel
ಕಂಪ್ಲಿಯಲ್ಲಿ ರೈತನೊಬ್ಬ ಟ್ರ್ಯಾಕ್ಟರ್‌ಗೆ ಕೇಜ್‌ವ್ಹೀಲ್ ಜೋಡಿಸಿ ಒಯ್ಯುತ್ತಿರುವುದು.
Published on

ಕಂಪ್ಲಿ: ತಾಲೂಕಿನ ಬಹುತೇಕ ರಸ್ತೆಗಳಲ್ಲಿ ಉದ್ದನೆಯ ಗೆರೆಗಳು ಮೂಡಿದ್ದು, ಬೈಕ್‌ಗಳನ್ನು ಅಲ್ಲಾಡಿಸುವಷ್ಟು ದಟ್ಟವಾಗಿವೆ. ಟ್ರ್ಯಾಕ್ಟರ್‌ಗೆ ಕೇಜ್‌ವ್ಹೀಲ್ ಅಳವಡಿಸಿಕೊಂಡು ಒಯ್ಯುತ್ತಿರುವುದರಿಂದ ಮೂಡಿದ್ದು, ರಸ್ತೆಗಳು ಹಾಳಾಗುತ್ತಿವೆ. ಅಲ್ಲದೆ ಸಂಚಾರವೂ ಕಷ್ಟವಾಗಿದೆ.

ಉತ್ತಮ ಮಳೆ, ಕಾಲುವೆಗಳಲ್ಲಿ ನೀರು ಹರಿಯುತ್ತಿರು ವುದರಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ರೈತರು ಭೂಮಿ ಸಿದ್ಧತೆಗೆ ಟ್ರ್ಯಾಕ್ಟರ್ ಬಳಸುವುದು ಸಾಮಾನ್ಯ. ಕಬ್ಬಿಣದ ಕೇಜ್‌ವ್ಹೀಲ್‌ಗಳನ್ನು ಟ್ರ್ಯಾಕ್ಟರ್‌ಗೆ ಜೋಡಿಸಿ ಗದ್ದೆಗೆ ಒಯ್ಯುವುದು ರೂಢಿ. ರಸ್ತೆ ಮೂಲಕ ಒಯ್ಯುವುದರಿಂದ ರಸ್ತೆಗಳು ಬಿದ್ದು, ಬಹುಬೇಗ ಹಾಳಾಗಲು ಕಾರಣವಾಗುತ್ತಿದೆ. ಕೇಜ್‌ವ್ಹೀಲ್ ಅನ್ನು ಟ್ರ್ಯಾಕ್ಟರ್‌ಗೆ ಅಳವಡಿಸಿ, ಮೇಲೆತ್ತಿಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಕೇಜ್‌ವ್ಹೀಲ್ ರಸ್ತೆಗೆ ತಾಕಬಾರದು. ರೈತರು ಈ ಕುರಿತು ಮುಂಜಾಗ್ರತೆವಹಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ರೈತರು ದಯಮಾಡಿ ರಸ್ತೆ ಮೇಲೆ ಕೇಜ್‌ವ್ಹೀಲ್ ತಾಗಿಸಿಕೊಂಡು ಟ್ರ್ಯಾಕ್ಟರ್ ಚಲಾಯಿಸಬಾರದು. ರಸ್ತೆ ಅಭಿವೃದ್ಧಿಗೆ ಅನುದಾನ ದೊರಕುವುದೇ ಕಠಿಣವಾಗಿದೆ. ರೈತರು ರಸ್ತೆಗಳನ್ನು ಕಾಪಾಡಿಕೊಳ್ಳಲು ಕಾಳಜಿ ತೋರಬೇಕು.| ಜೆ.ಎನ್.ಗಣೇಶ್ ಶಾಸಕ, ಕಂಪ್ಲಿ

ಕೇಜ್‌ವ್ಹೀಲ್‌ನ್ನು ಗದ್ದೆಯಲ್ಲೆ ಅಳವಡಿಸಿ ಕೊಳ್ಳಬೇಕು. ರಸ್ತೆ ಮೇಲೆ ಬಳಸಬಾರದು. ಇನ್ನೊಂದು ಗದ್ದೆಗೆ ಒಯ್ಯುವಾಗ ರಸ್ತೆಗೆ ತಾಕಿಸಿ ಕೇಜ್‌ವ್ಹೀಲ್ ಒಯ್ಯದೆ ಮೇಲೆತ್ತಿ ಜೋಡಿಸಿಕೊಂಡು ಒಯ್ಯಬೇಕು. ರೈತರು ಸಹಕರಿಸಬೇಕು.| ಬಿ.ವಿ.ಗೌಡ ಜಿಲ್ಲಾಧ್ಯಕ್ಷ, ರಾಜ್ಯ ರೈತ ಸಂಘ, ಕಂಪ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net