

ಕಂಪ್ಲಿ: ನಾಗಚೌತಿ ನಿಮಿತ್ತ ಪಟ್ಟಣ ಸೇರಿ ತಾಲೂಕಾದ್ಯಂತ ನಾಗರ ಪ್ರತಿಮೆ, ಹೊಲಗದ್ದೆಗಳಲ್ಲಿನ ಹುತ್ತಗಳಿಗೆ ಭಕ್ತರು ಗುರುವಾರ ಹಾಲು ಎರೆದು ಪೂಜೆ ಸಲ್ಲಿಸಿದರು.
ಇಲ್ಲಿನ ಕೋಟೆಯ ತುಂಗಭದ್ರಾ ನದಿ ತಟದ ಐತಿಹಾಸಿಕ ಪಂಪಾಪತಿ ದೇವಸ್ಥಾನ ಎದುರಿನ ನಾಗ ಪ್ರತಿಮೆಗಳ ಸಮುಚ್ಚಯ ಕಟ್ಟೆ, ಪೇಟೆ ಬಸವೇಶ್ವರ, ರಾಮಲಿಂಗ ದೇವಸ್ಥಾನ, ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿನ ಸುಬ್ರಹ್ಮಣ್ಯ ನಾಗಪ್ರತಿಮೆ, ನಟರಾಜ ಕಲಾವಿಜಯ ಸಂಘದ ಬಳಿ ಬಾವಿ, ಎಪಿಎಂಸಿಯ ಆವರಣಗೋಡೆಯ ಬಳಿ ಈರಣ್ಣ ಗುಡಿ ಸೇರಿ ಬಾವಿ, ವೃಕ್ಷಗಳ ಬುಡದಲ್ಲಿ ಪ್ರತಿಷ್ಠಾಪಿಸಿದ ನಾಗಪ್ರತಿಮೆಗಳಿಗೆ ಕುಟುಂಬದ ಸದಸ್ಯರೊಂದಿಗೆ ಪೂಜಿಸಿ ಹಾಲೆರೆದು ಭಕ್ತಿ ಸಮರ್ಪಿಸಿದರು.
ಗ್ರಾಮೀಣ ಭಾಗಗಳಲ್ಲಿನ ರೈತಾಪಿ ಜನರು ಹೊಲಗದ್ದೆಗಳಲ್ಲಿನ ಹುತ್ತ, ನಾಗಪ್ರತಿಮೆಗಳಿಗೆ ಹಾಲೆರೆದರು. ನಾಗ ಪ್ರತಿಮೆಗಳಿಗೆ ಹತ್ತಿಯ ಅಂಗನೂಲು ಹಾಕಿ, ಹಾಲೆರೆದು ತಂಬಿಟ್ಟುನೊಂದಿಗೆ ನಾನಾ ತರಹದ ಉಂಡಿಗಳನ್ನು, ಹಸಿಕಡ್ಲೆಯನ್ನು ನೈವೇದ್ಯವಾಗಿ ಅರ್ಪಿಸಿದರು. ನಸುಕಿನಜಾವ ಮನೆ ಅಂಗಳದಲ್ಲಿ ನಾಗಬಂಧ, ನಾನಾ ನಾಗಗಳ ರಂಗೋಲಿ ಹಾಕಿದ್ದರು.