

ಕಂಪ್ಲಿ: ತಾಲೂಕಿನಲ್ಲಿ ಬುಧವಾರ ರಾತ್ರಿ ಗುಡುಗು, ಮಿಂಚಿನೊಂದಿಗೆ ಸರಾಸರಿ 60.8 ಮಿ.ಮೀ. ಮಳೆ ಸುರಿದಿದೆ. ಮಳೆಯಿಂದಾಗಿ ಹಳ್ಳ, ಕೆರೆಗಳು ತುಂಬಿ ಹರಿಯುತ್ತಿವೆ. ತುಂಗಭದ್ರಾ ನದಿ ಪಾತ್ರದಲ್ಲಿ ಭತ್ತ ಬೆಳೆ ನೆಲಕ್ಕೊರಗಿದೆ. ಒಂದು ಕಚ್ಚಾ ಮನೆಯ ಛಾವಣಿ ಕುಸಿದಿದ್ದು, ವಿದ್ಯುತ್ ಕಂಬ ಮುರಿದಿದೆ.
ಸಣಾಪುರ, ಇಟಗಿ, ಬೆಳಗೋಡ್‌ಹಾಳ್, ಅರಳಿಹಳ್ಳಿ ಹಾಗೂ ಇತರೆಡೆ ಮಳೆಯಿಂದಾಗಿ ಭತ್ತದ ಬೆಳೆ ನೆಲಕ್ಕುರುಳಿದೆ. ಸದ್ಯ ಭತ್ತ ತೆನೆ ಒಡೆಯುವ ಹಂತದಲ್ಲಿದ್ದು ದುಂಡಾಡು ಮಚ್ಚೆ ರೋಗದಿಂದಾಗಿ ರೈತರು ಆತಂಕದಲ್ಲಿದ್ದರು. ಇದೀಗ ಮಳೆಗೆ ಭತ್ತ ನೆಲಕ್ಕೊರಗಿದ್ದರಿಂದ ಮತ್ತಷ್ಟು ನಷ್ಟ ಅನುಭವಿಸಬೇಕಾಗಿದೆ.
ಭತ್ತದ ಕೊಯ್ಲಿಗೆ 35ರಿಂದ 40 ದಿನ ಬಾಕಿಯಿದೆ. ಎಕರೆಗೆ ಸುಮಾರು 35 ಸಾವಿರ ರೂಪಾಯಿ ಖರ್ಚು ಮಾಡಿರುವ ರೈತರು ನೆಲಕ್ಕೆ ಬಿದ್ದ ಭತ್ತವನ್ನು ಎತ್ತಿ ಕಟ್ಟಲು ಎಕರೆಗೆ 15ರಿಂದ 16 ಸಾವಿರ ರೂ. ವೆಚ್ಚ ಭರಿಸಬೇಕಿದೆ. ಕೃಷಿ ಕಾರ್ಮಿಕರ ಕೊರತೆಯೂ ಕಾಡುತ್ತಿದೆ. ಭತ್ತ ನೆಲಕ್ಕೆ ಬಿದ್ದಿರುವುದರಿಂದ ಇಳುವರಿ ಮೇಲೆ ಪರಿಣಾಮ ಬೀರಲಿದೆ ಎಂದು ರೈತರು ಆತಂಕಗೊಂಡಿದ್ದಾರೆ. ಹಂಪಾದೇವನಹಳ್ಳಿ ಗ್ರಾಮದಲ್ಲಿ ಬಿ.ಶಿವರಾಜ ಅವರ ಕಚ್ಚಾಮನೆಯ ಛಾವಣಿ ಕುಸಿದಿದೆ. ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮರದ ಟೊಂಗೆ ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಕಂಬ ಮುರಿದಿದೆ. ಜವುಕು -ದೇವಲಾಪುರ ಒಳ ರಸ್ತೆಯಲ್ಲಿ ಕಾನಗುಡ್ಡದ ಮಳೆ ನೀರು ಭತ್ತ ಗದ್ದೆ, ರಸ್ತೆ ಮೇಲೆ ಹರಿದು ಭತ್ತ ಬೆಳೆ ಹಾನಿಯಾಗಿದೆ. ಬಳ್ಳಾಪುರ-ಚಿಕ್ಕಜಾಯಿಗನೂರು ಮಧ್ಯದ ನಾರಿಹಳ್ಳದ ಸೇತುವೆ ಮುಳುಗಡೆಗೊಂಡಿದೆ. ಇದರಿಂದಾಗಿ ಚಿಕ್ಕಜಾಯಿಗನೂರಿನ ಗ್ರಾಮಸ್ಥರು ಹಂಪಾದೇವನಹಳ್ಳಿ ಮೂಲಕ ಬಳ್ಳಾಪುರಕ್ಕೆ ಸುತ್ತಿ ಬಳಸಿ ಸಂಚರಿಸಬೇಕಿದೆ.