

ಕಂಪ್ಲಿ: ಮರಾಠರು ರಾಜ್ಯದ ಅವಿಭಾಜ್ಯ ಅಂಗ. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯಲ್ಲಿ ರಾಜಕೀಯ ಸ್ವಾರ್ಥವಿಲ್ಲ ಎಂದು ಸರ್ಕಾರದ ನಡೆಯನ್ನು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಸಮರ್ಥಿಸಿಕೊಂಡರು.
ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಮರಾಠರು ಕನ್ನಡಕ್ಕೆ ಆದ್ಯತೆ ಕೊಡುತ್ತ ಬಂದಿದ್ದಾರೆ. ಅವರು ರಾಜ್ಯದ ಅವಿಭಾಜ್ಯ ಅಂಗವಿದ್ದಂತೆ. ರಾಜಕೀಯಕ್ಕಾಗಿ ನಿಗಮ ಮಾಡಿಲ್ಲ. ಅವರು ಕನ್ನಡ ಉಳಿಸಬೇಕೆಂದು ತಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದುತ್ತಿದ್ದಾರೆ. ಕನ್ನಡಪರ ಹೋರಾಟಗಳನ್ನು ಮಾಡುತ್ತಿದ್ದಾರೆ. ಅವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ಬರಲು, ಸೌಕರ್ಯ ಒದಗಿಸಲು ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ ಎಂದರು.
ಮಹಾರಾಷ್ಟ್ರಿಗರು ತಲೆ ಕೆಳಗೆ ಮಾಡಿ ಕಾಲು ಮೇಲೆ ಮಾಡಿದರೂ ನಮ್ಮ ಭಾಗದ ರಾಗಿಕಾಳಿನಷ್ಟು ಜಮೀನನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ. ಮರಾಠಿಗರು ಪುಂಡಾಟಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕದಲ್ಲಿನ ಮರಾಠಿಗರನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಕನ್ನಡ ಗಡಿಭಾಗದಲ್ಲಿ ಸಂಪೂರ್ಣ ಕನ್ನಡಕ್ಕಾಗಿ ಸರ್ಕಾರ ಪ್ರಯತ್ನಿಸುತ್ತದೆ ಎಂದು ಹೇಳಿದರು.