

ಕಂಪ್ಲಿ: ಶಿಬರದಿನ್ನಿಯ ಸಮುದಾಯ ಭವನದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ನೂರಾರು ಜನ ಪುರಸಭೆ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ ಮತ್ತು ತಹಸೀಲ್ದಾರ್ ಗೌಸಿಯಾಬೇಗಂಗೆ ಮಂಗಳವಾರ ಮನವಿ ಸಲ್ಲಿಸಿದರು.
ಶಿಬಿರದಿನ್ನಿಯ ಪ್ರಮುಖ ಜಂಗಾ ನಾಗರಾಜ ಮಾತನಾಡಿ, ಈ ಪ್ರದೇಶದ ವಸತಿ ವಿನ್ಯಾಸದ ಸಿಎ ನಿವೇಶನದಲ್ಲಿ 12 ವರ್ಷಗಳ ಹಿಂದೆ ಪುರಸಭೆಯು ಸಮುದಾಯ ಭವನ ನಿರ್ಮಿಸಲಾಗಿತ್ತು. ಇಲ್ಲಿ ಹಿಂದುಗಳ ದೇವಸ್ಥಾನ ಇರದ ಕಾರಣ ಶುಭ ಕಾರ್ಯ ನಡೆಯುತ್ತಿರಲಿಲ್ಲ. ಸಮುದಾಯ ಭವನದ ಆವರಣದಲ್ಲಿ ಹಿಂದು ದೇವರ ಪ್ರತಿಷ್ಠಾಪನೆಗೆ ಅನೇಕ ಬಾರಿ ಪುರಸಭೆಗೆ ಒತ್ತಾಯಿಸುತ್ತ ಬರಲಾಗಿತ್ತು. ಇಲ್ಲಿನ ಬಡ, ಹಿಂದುಳಿದ ವರ್ಗಗಳ ಶುಭ ಸಮಾರಂಭಗಳಿಗಾಗಿ ಸಮುದಾಯ ಭವನದ ಆವರಣದಲ್ಲಿ ಹಿಂದು ದೇವತೆಯ ದೇವಸ್ಥಾನ ಅಗತ್ಯವಿದೆ. ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಪುರಸಭೆ, ತಾಲೂಕು ಆಡಳಿತ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಎಚ್.ಅಮರೇಶ್, ಕೊಟ್ರೇಶ್, ರಮೇಶ್, ಮಲ್ಲಿಕಾರ್ಜುನ, ವೀರಭದ್ರಪ್ಪ, ಉಪ್ಪಾರ ಲಕ್ಷ್ಮಮ್ಮ, ಗಂಗಮ್ಮ, ಪಕ್ಕೀರಮ್ಮ, ಕೋಟೆ ಲಕ್ಷ್ಮಮ್ಮ, ಅಯ್ಯಮ್ಮ ಇತರರಿದ್ದರು.