

ಕಂಪ್ಲಿ: ಶಿಕ್ಷಕ ದಿನಾಚರಣೆ ನಿಮಿತ್ತ ಕಂಪ್ಲಿಯ ಷಾ.ಮಿಯಾಚಂದ್ ಸರ್ಕಾರಿ ಪ್ರೌಢ ಶಾಲೆ ಮೈದಾನದಲ್ಲಿ, ಶಿಕ್ಷಕರ ಸಂಘಗಳ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಕರ ಕ್ರೀಡಾಕೂಟ ಶನಿವಾರ ಆರಂಭಗೊಂಡಿತು.
ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತ ಮಾತನಾಡಿ, ತಾಲೂಕಿನ ಸರ್ಕಾರಿ, ಅನುದಾನರಹಿತ ಸೇರಿ ಎಲ್ಲ ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಕರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಕಬಡ್ಡಿ, ಥ್ರೋಬಾಲ್, ಕ್ರಿಕೆಟ್, ಜನಪದ, ಭಾವಗೀತೆ, ದೇಶ ಭಕ್ತಿ ಹಾಡುಗಾರಿಕೆ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಿದ್ದು, ವಿಜೇತರಿಗೆ ಸೆ.27ರಂದು ನಡೆಯುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು. ಪದಾಧಿಕಾರಿಗಳಾದ ಎಂ.ಎ.ನಾಗನಗೌಡ, ಕೋಳಿ ಸೋಮಶೇಖರ್, ಸುನೀತಾ ಪೂಜಾರಿ, ರಾಜೇಶ್ವರಿ, ಜೋಗಿ ರುದ್ರಪ್ಪ, ಬಿ.ಚಂದ್ರಶೇಖರ್ ಸೇರಿ ಇತರರಿದ್ದರು.