ಸಕಾಲಕ್ಕೆ ಪಾವತಿಸದ ತೆರಿಗೆ ಈಗ ಹೊರೆ

Published on

ಕಂಪ್ಲಿ: ಪಟ್ಟಣದಲ್ಲಿ ಆಸ್ತಿ ಮತ್ತು ನೀರಿನ ತೆರಿಗೆ ಸಕಾಲಕ್ಕೆ ಪಾವತಿಸದವರ ಮನೆಗಳಿಗೆ ಪುರಸಭೆ ಸಿಬ್ಬಂದಿ ವಸೂಲಿಗೆ ಹೋಗುತ್ತಿದ್ದು, ತೆರಿಗೆ ಬಾಕಿ ಪಟ್ಟಿ ಕೇಳಿಯೇ ಮಾಲೀಕರು ಬೆಸ್ತು ಬೀಳುತ್ತಿದ್ದಾರೆ.

ಹಲವು ವರ್ಷಗಳಿಂದ ತೆರಿಗೆ ಕಟ್ಟದಿರುವುದರಿಂದ ಸಾವಿರಾರು ರೂ. ಬಾಕಿ ಉಳಿದಿದ್ದು, ಸಾಮಾನ್ಯರಿಗೆ ಈಗ ಹೊರೆಯಾಗಿ ಪರಿಣಮಿಸಿದೆ. ಮನೆಮನೆಗೆ ತೆರಳಿ ತೆರಿಗೆ ವಸೂಲಿ ಮಾಡುವಂತೆ ಮೇಲಧಿಕಾರಿಗಳು ಸೂಚಿಸಿದರೆ, ಸದ್ಯ ಕೈಬಿಡಿ ಎನ್ನುವ ನಾಯಕರ ಒತ್ತಡಕ್ಕೆ ಸಿಬ್ಬಂದಿ ರೋಸಿ ಹೋಗಿದ್ದಾರೆ.

ಪಟ್ಟಣದಲ್ಲಿ 4,552 ನಳಗಳಿದ್ದು, ಈ ಪೈಕಿ 4184 ವಸತಿ, 32 ವಾಣಿಜ್ಯ ಹಾಗೂ 368 ಅನಧಿಕೃತ ಇವೆ. ಜನವರಿವರೆಗೆ 49.72ಲಕ್ಷ ರೂ. ತೆರಿಗೆ ವಸೂಲಿ ಮಾಡಲಾಗಿದೆ. ಇನ್ನು 13,203 ಆಸ್ತಿಗಳಿದ್ದು, 8,221 ವಸತಿ ಮನೆ, 685 ವಾಣಿಜ್ಯ ಮಳಿಗೆ, 15 ಕೈಗಾರಿಕಾ ಮಳಿಗೆ, 4,282 ಖಾಲಿ ನಿವೇಶನಗಳಿದ್ದು, 2 ಕೋಟಿ ರೂ. ತೆರಿಗೆ ವಸೂಲಿ ಮಾಡಿ ಶೇ.93 ಪ್ರಗತಿ ಸಾಧಿಸಲಾಗಿದೆ. ಈ ಪೈಕಿ ಎಂಟು ಅಕ್ಕಿ ಗಿರಣಿಗಳ 40 ಲಕ್ಷ ರೂ. ತೆರಿಗೆ ಬಾಕಿ ಇದೆ.

ಸದ್ಯ ಬಾಕಿ ಇರುವ ತೆರಿಗೆ ವಸೂಲಿಗೆ ಪ್ರಭಾರ ಕಂದಾಯ ಅಧಿಕಾರಿ ಪ್ರಶಾಂತ ಚಿತ್ರಗಾರ ನೇತೃತ್ವದಲ್ಲಿ ಮೂರು ತಂಡ ರಚಿಸಿದ್ದು, ಮನೆ ಮನೆಗೆ ತೆರಳಿ ತೆರಿಗೆ ಪಾವತಿಸಿಕೊಳ್ಳಲಾಗುತ್ತಿದೆ. ಆಸ್ತಿ, ನೀರು ತೆರಿಗೆಯನ್ನು ಪ್ರಸಕ್ತ ಆರ್ಥಿಕ ಸಾಲಿನ ಆರಂಭದಲ್ಲಿಯೇ ಪಾವತಿಸಿ ರಿಯಾಯಿತಿ ಪಡೆದುಕೊಳ್ಳಬಹುದು. ತಡವಾಗಿ ಪಾವತಿಸಿದಲ್ಲಿ ಶೇ.2ರಷ್ಟು ದಂಡ ವಿಧಿಸಲಾಗುವುದು. ಅತಿ ಹೆಚ್ಚು ಬಾಕಿ ಇರುವ ತೆರಿಗೆದಾರರನ್ನು ಗುರುತಿಸಿ ಜಪ್ತಿ ನೋಟಿಸ್ ಜಾರಿ ಮಾಡಲಾಗುತ್ತಿದೆ. ಅಲ್ಲದೆ, ಆಸ್ತಿ ಮತ್ತು ನೀರಿನ ತೆರಿಗೆ ಬಾಕಿ ಉಳಿಸಿಕೊಂಡರೆ ನಳ ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಕೆ. ದುರುಗಣ್ಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net