ಕಂಪ್ಲಿಯಲ್ಲಿ ಬಿಇಒ ಕಚೇರಿ ಆರಂಭದ ಭರವಸೆ

19082022 Kampli news
Published on

ಕಂಪ್ಲಿ: ತಾಂತ್ರಿಕ ತೊಂದರೆಯಿಂದ ಕಂಪ್ಲಿ ತಾಲೂಕು ಕೇಂದ್ರದಲ್ಲಿ ಬಿಇಒ ಕಚೇರಿ ಆರಂಭಗೊಂಡಿಲ್ಲ. ಶಿಕ್ಷಣ ಆಯುಕ್ತರ ಗಮನಕ್ಕೆ ತಂದು ಬಿಇಒ ಕಚೇರಿ ಆರಂಭಿಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ಸಮಿತಿ ಅಧ್ಯಕ್ಷ ಶಶಿಲ್ ಜಿ.ನಮೋಶಿ ಹೇಳಿದರು.

ಇಲ್ಲಿನ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಶಿಕ್ಷಕರೊಂದಿಗೆ ಸಮಾಲೋಚಿಸಿ, ಸೆ.17ರಂದು ಕಕ ವಿಮೋಚನಾ ಅಮೃತ ಮಹೋತ್ಸವಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಷಾ ಚಾಲನೆ ನೀಡಿದ್ದು, ವಿಮೋಚನೆ ಸಾಹಿತ್ಯವನ್ನು ಸಣ್ಣ ಪುಸ್ತಿಕೆಗಳಲ್ಲಿ ವಿತರಿಸಲು ಯೋಜಿಸಲಾಗಿದೆ ಎಂದರು.

ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಟಿ.ಎಂ.ಬಸವರಾಜ ಮಾತನಾಡಿ, ಶಿಕ್ಷಕರ ವೇತನ ಪಾವತಿ ವಿಳಂಬ ಸರಿಪಡಿಸುವುದು, ಬಿಇಒ ಕಚೇರಿ ಆರಂಭಿಸುವುದು, ದೈಹಿಕ ಶಿಕ್ಷಕ, ವಿಶೇಷ ಶಿಕ್ಷಕರ ಹುದ್ದೆಗಳ ಭರ್ತಿಮಾಡುವುದು, ಡಿಜಿಟಲ್ ತರಗತಿ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನೇಮಿಸುವಂತೆ ಒತ್ತಾಯಿಸಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ.ನಾಗನಗೌಡ, ಪ್ರಮುಖರಾದ ಬಿ.ಸುನೀಲ್, ಕೆ.ರಾಮಚಂದ್ರಪ್ಪ, ಬಸವರಾಜಪಾಟೀಲ್, ರಮೇಶ್ ಚಲುವಾದಿ, ಗಂಗಾಧರ ಜಡಿಮಠ, ಶಕುಂತಲಾ, ಗಾಯತ್ರಿದೇವಿ, ಅರುಣಾ, ಗೋದಾವರಿ, ನೀಲೋಫರ್ ಜಾನ್‌ಬೇಗಂ ಸೇರಿ ಶಿಕ್ಷಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net